ಉಡುಪಿ: ‘ಹೊರೋಗಿ ವಿಭಾಗ ಸೇವೆ ಜನರಿಗೆ ಲಭ್ಯ’
ಉಡುಪಿ, ಜೂ.29: ನಗರಸಭೆಯ ಎದುರು ಭವ್ಯವಾಗಿ ತಲೆ ಎತ್ತಿನಿಂತಿರುವ ಆರು ಅಂತಸ್ತುಗಳ ಅತ್ಯಾಧುನಿಕ ‘ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಯ ಹೊರರೋಗಿ ವಿಭಾಗ ಈಗಾಗಲೇ ಕಾರ್ಯಾರಂಭ ಮಾಡಿದ್ದು, ಪ್ರತಿದಿನ 90ರಿಂದ 110 ಮಂದಿ ರೋಗಿಗಳು ಬರುತಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ (ಎಂಎಸ್) ಡಾ.ಜಗದೀಶ್ ಶರ್ಮ ತಿಳಿಸಿದ್ದಾರೆ.
200 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ಅಧಿಕಾರಿಗಳ ಅನುಮತಿ ಪಡೆದು ಹೊರರೋಗಿ ವಿಭಾಗವನ್ನು ಆರಂಭಿಸಿದ್ದೇವೆ. ದಾಖಲಾತಿ ಸೇರಿದಂತೆ ವಿವಿಧ ಸೇವೆಗಳು ಆರಂಭಗೊಳ್ಳಲು ಸರಕಾರ ಮಟ್ಟದಲ್ಲಿ ಅನುಮತಿ ಅಗತ್ಯವಿದೆ. ಅನುಮತಿ ಸಿಕ್ಕಿದ ತಕ್ಷಣ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದವರು ತಿಳಿಸಿದರು.
ಈಗಾಗಲೇ ಐವರು ಸ್ತ್ರೀರೋಗ ತಜ್ಞರು, ಮೂವರು ಮಕ್ಕಳ ತಜ್ಞರು ಹಾಗೂ ನಾಲ್ವರು ಡ್ಯೂಟಿ ಡಾಕ್ಟರ್‌ಗಳಲ್ಲದೇ 57 ಮಂದಿ ನರ್ಸ್‌ಗಳನ್ನು ಸೇವೆಗೆ ತೆಗೆದು ಕೊಳ್ಳಲಾಗಿದೆ. ಈಗ ನೇಮಕಗೊಂಡವರೆಲ್ಲ ಸ್ಥಳೀಯರೇ ಆಗಿದ್ದಾರೆ. ಅಗತ್ಯ ಬಿದ್ದರೆ ಇನ್ನಷ್ಟು ಮಂದಿಯನ್ನು ನೇಮಿಸಿಕೊಳ್ಳುತ್ತೇವೆ ಎಂದವರು ವಿವರಿಸಿದರು.
‘ಈಗ ಪರೀಕ್ಷೆಗೆ ಬರುವ ಯಾರಿಂದಲೂ ಯಾವುದೇ ಶುಲ್ಕ ತೆಗೆದು ಕೊಳ್ಳುವುದಿಲ್ಲ. ಪೂರ್ಣಪ್ರಮಾಣದಲ್ಲಿ ಸೇವೆ ಆರಂಭಗೊಂಡಾಗಲೂ ಇಲ್ಲಿ ಯಾವುದೇ ಶುಲ್ಕವಿರುವುದಿಲ್ಲ. ವಿಶೇಷವೆಂದರೆ ಈ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ವಿಭಾಗವೇ ಇರುವುದಿಲ್ಲ. ಇಲ್ಲಿ ಲಭ್ಯವಿರುವ ಎಲ್ಲಾ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳು ಸಂಪೂರ್ಣ ಉಚಿತವಾಗಿ ಬಡವರಿಗೆ ದೊರೆಯಲಿದೆ.’ ಎಂದು ಆಸ್ಪತ್ರೆಯ ಜಿಎಂ ಪ್ರಶಾಂತ್ ಮಲ್ಯ ತಿಳಿಸಿದರು.
ಸದ್ಯಕ್ಕೆ ಪಕ್ಕದ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಹೆಂಗಸರ ಮತ್ತು ಮಕ್ಕಳ ಆಸ್ಪತ್ಪೆಯಲ್ಲಿ ನೊಂದಣಿ ಮಾಡಿಸಿಕೊಂಡು ಬಂದವರಿಗೆ ಹೊರರೋಗಿ ವಿಭಾಗ ಸೇವೆ ನೀಡುತ್ತೇವೆ. ಗರ್ಭೀಣಿಯರಿಗೆ ತಪಾಸಣೆ ನಡೆಸಿದರೂ, ಅವರು ಹೆರಿಗೆಗೆ ಅಲ್ಲಿಗೆ ದಾಖಲಾಗಬೇಕಾಗಿದೆ. ಸರಕಾರದ ಅನುಮತಿ ದೊರೆತ ಬಳಿಕ ಎಲ್ಲಾ ಸೇವೆ, ಸೌಲಭ್ಯಗಳು ಇಲ್ಲಿಯೇ ದೊರೆಯಲಿದೆ ಎಂದರು.
ಆರು ಮಹಡಿಯ ಆಸ್ಪತ್ರೆ: ಈ ನಿರ್ಮಾಣಗೊಂಡಿರುವ ಆಸ್ಪತ್ರೆ ಆರು ಅಂತಸ್ತನ್ನು ಹೊಂದಿದೆ. ಇದರ ತಳ ಅಂತಸ್ತಿನಲ್ಲಿ ನೊಂದಣಿ, ಪ್ರಯೋಗಾಲಯ, ಫಿಸಿಯೋಥೆರಪಿ, ತುರ್ತುಚಿಕಿತ್ಸೆ, ಫಾರ್ಮಸಿ, ರಕ್ತಪರೀಕ್ಷೆ ಕೇಂದ್ರಗಳಿದ್ದರೆ, ಮೊದಲ ಮಹಡಿಯಲ್ಲಿ ಪಾರ್ಕಿಂಗ್, ಎರಡನೇ ಮಹಡಿಯಲ್ಲಿ ಹೊರರೋಗಿ ವಿಭಾಗ, ಚಿಕಿತ್ಸಾ ಕೊಠಡಿ, ಡೇ ಕೇರ್ ಸೆಂಟರ್, ಸ್ತ್ರೀರೋಗ ಚಿಕಿತ್ಸಾ ವಿಭಾಗ, ಅಲ್ಟ್ರಾ ಸೌಂಡ್, ದಾಖಲಾತಿ ವಿಭಾಗಗಳಿವೆ.
ಮೂರನೇ ಮಹಡಿಯಲ್ಲಿ ಹೆರಿಗೆ ವಾರ್ಡ್, ಹೆರಿಗೆ ರೂಮು, ಶಸ್ತ್ರಚಿಕಿತ್ಸಾ ಕೊಠಡಿ, ಐಸಿಯು ಇದ್ದರೆ, ನಾಲ್ಕನೇ ಮಹಡಿಯಲ್ಲಿ ನವಜಾತ ಶಿಶುವಿನ ಐಸಿಯು, ಮಕ್ಕಳ ಐಸಿಯು, ಮಕ್ಕಳ ವಾರ್ಡ್, ಪುನಶ್ಚೇತನಾ ಕ್ಲಿನಿಕ್, ಐದನೇ ಮಹಡಿಯಲ್ಲಿ ಪ್ರಸವೋತ್ತರ ಹಾಗೂ ಪ್ರಸವ ಪೂರ್ವ ವಾರ್ಡ್ ಆರನೇ ಮಹಡಿಯಲ್ಲಿ ಆಡಳಿತಾತ್ಮಕ ಕಚೇರಿ ಹಾಗೂ ಸ್ತ್ರೀರೋಗ ವಾರ್ಡ್‌ಗಳಿರುತ್ತವೆ ಎಂದು ಮಲ್ಯ ವಿವರಿಸಿದರು.







