ಮಂಡ್ಯ : ಎಸ್ಪಿ ಕಚೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ
ಮಂಡ್ಯ, ಜೂ.29: ಒಂದು ದಿನದ ಹಿಂದೆಯಷ್ಟೇ ಅಮಾನತುಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಮಹಿಳಾ ಉದ್ಯೋಗಿಯೊಬ್ಬರು ಕಚೇರಿಯಲ್ಲೇ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಸಿರುವ ಘಟನೆ ಶುಕ್ರವಾರ ನಡೆದಿದೆ.
ಪ್ರಥಮ ದರ್ಜೆ ಗುಮಾಸ್ತೆ ಕಮಲಮ್ಮ(58) ಎಂಬುವವರೆ ಆತ್ಮಹತ್ಯೆಗೆ ಯತ್ನಿಸಿದವರು. ದುರ್ನಡತೆ ಹಿನ್ನಲೆಯಲ್ಲಿ ಅಮಾನತ್ತಿಗೆ ಒಳಗಾಗಿದ್ದ, ಕಮಲಮ್ಮ ಶುಕ್ರವಾರ ಎಸ್ಪಿ ಅವರನ್ನು ಭೇಟಿಯಾಗಲು ಕಚೇರಿಗೆ ಆಗಮಿಸಿ ಸಾರ್ವಜನಿಕರ ಗ್ಯಾಲರಿಯಲ್ಲಿ ಕುಳಿತಿದ್ದಾಗ ದಿಢೀರ್ ಅಸ್ವಸ್ಥಗೊಂಡರು. ಸಹದ್ಯೋಗಿಗಳು ತಕ್ಷಣ ತುರ್ತು ಚಿಕಿತ್ಸಾ ವಾಹನದಲ್ಲಿ ಮಿಮ್ಸ್ ಅಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಮಲಮ್ಮ ಎಸ್ಪಿ ಕಚೇರಿಯ ವಾಹನ ನಿರ್ವಹಣೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವಾಹನ ನಿರ್ವಹಣೆಯಲ್ಲಿನ ಭ್ರಷ್ಟಾಚಾರ ಬಹಿರಂಗಗೊಳ್ಳಲು ಕಾರಣರಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದು ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಕಳೆದ ಒಂದು ವಾರದ ಹಿಂದೆ ಅವರನ್ನು ಎಸ್ಪಿ ಕಚೇರಿಯ ಕಂಪ್ಯೂಟರ್ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ತನಗೆ ಕಂಪ್ಯೂಟರ್ ಜ್ಞಾನವಿಲ್ಲದ ಕಾರಣ ವರ್ಗಾವಣೆ ಮಾಡಿದ್ದಾರೆ ಎಂದು ಕಮಲಮ್ಮ ರಜೆ ಮೇಲೆ ತೆರಳಿದ್ದರು ಎನ್ನಲಾಗಿದ್ದು, ಗುರುವಾರ ಕಚೇರಿಗೆ ಆಗಮಿಸಿದಾಗ ಎಸ್ಪಿ ಮತ್ತೆ ಮಳವಳ್ಳಿ ಉಪ ವಿಭಾಗಕ್ಕೆ ವರ್ಗಾಯಿಸಿದ ಆದೇಶವನ್ನು ತಿರಸ್ಕರಿಸಿದಾಗ ದುರ್ನಡತೆ ಹಿನ್ನಲೆಯಲ್ಲಿ ಅಮಾನತು ಆದೇಶ ಮಾಡಿದರೆಂದು ತಿಳಿದು ಬಂದಿದೆ.
ಎಸ್ಪಿ ಸ್ಪಷ್ಟನೆ: ಆತ್ಮಹತ್ಯೆಗೆ ಯತ್ನಿಸಿದ ಕಮಲಮ್ಮ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಸಾಕಷ್ಟು ಭ್ರಷ್ಟಾಚಾರ, ಕರ್ತವ್ಯ ಲೋಪ ಆರೋಪ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯಾಗಿ ಒಂದು ವಾರ ಕಳೆದರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿತ್ತು. ಅಮಾನತು ಮಾಡಿದ ಬಳಿಕ ನನ್ನನ್ನು ಭೇಟಿಯಾಗಲು ಆಗಮಿಸಿದಾಗ ಘಟನೆ ಜರುಗಿದೆ. ಕೂಡಲೇ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಜಿ.ರಾಧಿಕಾ ಸ್ಪಷ್ಟಪಡಿಸಿದ್ದಾರೆ.
ಆರೋಪ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೌಜನ್ಯವಾಗಿ ವರ್ತಿಸದ ಪರಿಣಾಮ ಕಮಲನದನ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಲ್ಲದೆಮ ಪ್ರಕರಣ ಮುಚ್ಚಿ ಹಾಕಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಮಹಿಳೆಯೊಬ್ಬರು ಎಸ್ಪಿ ಕಚೇರಿಯ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಸಿಯಾಗಿರುವಾಗಲೇ ಸಿಬ್ಬಂದಿ ಕಚೇರಿಯ ಆವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.







