ಮತ್ತೆ ನಾಲ್ವರು ಯುವಕರನ್ನು ಮಾನವ ಗುರಾಣಿಯಾಗಿ ಬಳಸಿದ ಸೇನೆ : ಆರೋಪ

ಶ್ರೀನಗರ, ಜೂ. 29: ಕಾಶ್ಮೀರದಲ್ಲಿ ಸೇನೆ ವ್ಯಕ್ತಿಯೋರ್ವನನ್ನು ಮಾನವ ಗುರಾಣಿಯನ್ನಾಗಿ ಬಳಿಸಿದ ಕುಖ್ಯಾತ ಘಟನೆಯ ಒಂದು ವರ್ಷದ ಬಳಿಕ, ಹಿಂಸಾಚಾರ ಪೀಡಿತ ವಲಯಗಳಲ್ಲಿ ಕಲ್ಲು ತೂರಾಟಗಾರರಿಂದ ರಕ್ಷಣೆ ಪಡೆಯಲು ಭದ್ರತಾ ಸಿಬ್ಬಂದಿ ನಾಗರಿಕರನ್ನು ರಕ್ಷಣೆಗಾಗಿ ಬಳಸಿಕೊಂಡಿರುವ ಹೊಸ ವೀಡಿಯೊ ಈಗ ವೈರಲ್ ಆಗಿದೆ.
ಈ ವೀಡಿಯೊವನ್ನು ಜೂನ್ 18ರಂದು ಶೂಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಭದ್ರತಾ ಪಡೆಯ ವಾಹನದ ಎದುರು ನಾಲ್ವರು ಯುವಕರು ಕುಳಿತಿರುವುದು ಕಂಡು ಬಂದಿದೆ. ‘‘ಅವರು ನಮ್ಮ ಸಹವರ್ತಿಗಳನ್ನು ವಾಹನದ ಎದುರು ಕುಳ್ಳಿರಿಸಿದ್ದಾರೆ. ಆದುದರಿಂದ ನಾವು ಕಲ್ಲೆಸೆಯಲಾರೆವು’’ ಎಂದು ಇತರ ಯುವಕರು ಹೇಳುತ್ತಿರುವುದು ಕೇಳಿ ಬಂದಿದೆ. ಘೋಷಣೆಗಳ ನಡುವೆ ಇತರ ಯುವಕರು “ನಾವು ಭದ್ರತಾ ಪಡೆ ಮೇಲೆ ಕಲ್ಲೆಸೆಯುವುದಿಲ್ಲ. ಯುವಕರನ್ನು ಬಿಡುಗಡೆ ಮಾಡಿ ಹಾಗೂ ಅವರನ್ನು ನಿಮ್ಮೊಂದಿಗೆ ಕರೆದೊಯ್ಯಿರಿ” ಎಂದು ಹೇಳಿರುವುದು ದಾಖಲಾಗಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಮಝಾನ್ ಕದನ ವಿರಾಮ ಘೋಷಿಸಿದ ಹಾಗೂ ಉಗ್ರ ನಿಗ್ರಹ ಕಾರ್ಯಾಚರಣೆ ನಿಲ್ಲಿಸುವಂತೆ ನಿರ್ದೇಶಿಸಿದ ದಿನ ಪುಲ್ವಾಮ ಜಿಲ್ಲೆಯ ಪಾಂಪೊರೆಯ ಸಂಬೂರಾ ಪ್ರದೇಶದ ಚೂನಿಮಾಲ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ಮೂವರು ಉಗ್ರರು ಅಡಗಿರುವ ಮಾಹಿತಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆ ಸಂಬೂರಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ಕಾರ್ಯಾಚರಣೆ ಸಂದರ್ಭ ಪೊಲೀಸರು, ಸಿಆರ್‌ಪಿಎಫ್ ಹಾಗೂ ಸೇನಾ ಸಿಬ್ಬಂದಿ ಮೇಲೆ ಯುವಕರು ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದಿಂದ ರಕ್ಷಿಸಿಕೊಳ್ಳಲು ಭದ್ರತಾ ಪಡೆ ನಾಲ್ವರು ಯುವಕರನ್ನು ಬಂಧಿಸಿತ್ತು ಹಾಗೂ ವಾಹನದ ಮುಂದೆ ಕುಳ್ಳಿರಿಸಿತ್ತು ಎನ್ನಲಾಗುತ್ತಿದೆ. ಈ ವೀಡಿಯೊದ ಸತ್ಯಾಸತ್ಯತೆ ಬಗ್ಗೆ ಇನ್ನಷ್ಟೇ ದೃಢಪಡಿಸಿಕೊಳ್ಳಬೇಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.







