ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಶಾಸಕ ರಘುಪತಿ ಭಟ್ ಆಗ್ರಹ

ಉಡುಪಿ, ಜೂ. 29: ಅಜ್ಜರಕಾಡು ಸರಕಾರಿ ಆಸ್ಪತ್ರೆಯು ಕೇವಲ ಬೋರ್ಡ್ ನಲ್ಲಿ ಮಾತ್ರ ಜಿಲ್ಲಾಸ್ಪತ್ರೆಯಾಗಿದ್ದು, ಈಗಲೂ ತಾಲೂಕು ಆಸ್ಪತ್ರೆಯಾಗಿಯೇ ಉಳಿದುಕೊಂಡಿದೆ. ಇಲ್ಲಿ ಸಿಬ್ಬಂದಿಗಳ ಕೊರತೆ ಸಾಕಷ್ಟು ಇದೆ. ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ತುಂಬಾ ಸೌಲಭ್ಯಗಳು ದೊರೆಯಲಿವೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆಸ್ಪತ್ರೆಗಳ ಅಗತ್ಯತೆಗಳ ಕುರಿತು ಚರ್ಚಿಸಲು ಇಂದು ಕರೆದ ವೈದ್ಯಾಧಿಕಾರಿಗಳ ಸಭೆಯ ಬಳಿಕ ಅವರು ಮಾಧ್ಯಮದವ ರೊಂದಿಗೆ ಮಾತನಾಡುತಿದ್ದರು.
ಆಸ್ಪತ್ರೆಗೆ ಕೆಲವು ಮಂಜೂರಾದ ಅನುದಾನಗಳು ಬಿಡುಗಡೆಗೆ ಬಾಕಿ ಇದ್ದು, ಅದನ್ನು ಪಟ್ಟಿ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಬಗ್ಗೆಯೂ ವಿಸ್ತೃತವಾದ ಚರ್ಚೆಯನ್ನು ಕೂಡ ಈ ಸಭೆಯಲ್ಲಿ ಮಾಡಲಾಗಿದೆ. ಅದನ್ನು ಸರಕಾರಿ ಆಸ್ಪತ್ರೆಯಾಗಿ ಉಳಿಸಿಕೊಳ್ಳುವ ಕುರಿತು ವೈದ್ಯಾಧಿಕಾರಿಗಳ ಸಲಹೆ ಗಳನ್ನು ಪಡೆದು ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಜಿಲ್ಲಾಸ್ಪತ್ರೆಗೆ ತುಂಬಾ ರೋಗಿಗಳು ಬರುತ್ತಿದ್ದಾರೆ. ಆದರೆ ಅದಕ್ಕೆ ಬೇಕಾದ ಸಿಬ್ಬಂದಿಗಳು ಇಲ್ಲಿ ಇಲ್ಲ. ಇದೇ ಇಲ್ಲಿನ ಪ್ರಮುಖ ಸಮಸ್ಯೆ. ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ 250 ಬೆಡ್‌ಗಳಾಗುತ್ತದೆ. ಜಿಲ್ಲಾಸ್ಪತ್ರೆಯಾಗಿ ಸರಕಾರದಿಂದ ಈವರೆಗೆ ಘೋಷಣೆಯಾಗಿಲ್ಲ. ಅದುವೇ ನಮ್ಮ ಆಗ್ರಹ ಎಂದು ಅವರು ಹೇಳಿದರು.
ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಮಾತನಾಡಿ, ವೈದ್ಯರು, ನರ್ಸ್, ಕಚೇರಿ, ಸ್ವಚ್ಛತಾ ಸಿಬ್ಬಂದಿಗಳು ಸೇರಿದಂತೆ ಒಟ್ಟು 545 ಹುದ್ದೆಗಳು ಬೇಕಾಗಿದ್ದು, ಆದರೆ ಪ್ರಸ್ತುತ ನಮ್ಮಲ್ಲಿ 250 ಸಿಬ್ಬಂದಿಗಳು ಮಾತ್ರ ಇದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವುದರಿಂದ ಇಬ್ಬಿಬ್ಬರು ತಜ್ಞ ವೈದ್ಯರು ಬೇಕಾಗಿದೆ. 1961ರಲ್ಲಿ ಈ ಆಸ್ಪತ್ರೆ ಕಟ್ಟಡ ನಿರ್ಮಾಣ ಆಗಿದ್ದು, ನೀರು ಸೋರಿಕೆ, ವಿದ್ಯುತ್ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಬಹುಮಹಡಿ ಕಟ್ಟಡ ನಿರ್ಮಿಸುವಂತೆ ಸರಕಾರಕ್ಕೆ ಎರಡು ವರ್ಷಗಳ ಹಿಂದೆ ಪ್ರಸ್ತಾಪ ಕಳುಹಿಸ ಲಾಗಿದೆ ಎಂದರು.
ಸಭೆಯಲ್ಲಿ ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ವೈದ್ಯಾಧಿಕಾರಿಗಳು ಹಾಜರಿದ್ದರು.







