ಪತ್ನಿಗೆ ವಿಮಾನ ಅಪಘಾತದ ಸಂದೇಶ ಕಳುಹಿಸಿದೆ, ಆದರೆ ಆಕೆಯೇ ಮೃತಪಟ್ಟಿದ್ದಳು
ಮೃತ ಪೈಲಟ್ ಪತಿಯ ಹೇಳಿಕೆ

ಮುಂಬೈ, ಜೂ.29: ಮುಂಬೈಯಲ್ಲಿ ಗುರುವಾರ ಸಂಭವಿಸಿದ ಚಾರ್ಟರ್ಡ್ ವಿಮಾ ನ ಅಪಘಾತ ಪ್ರಕರಣಕ್ಕೆ ವಿಮಾನಯಾನ ಸಂಸ್ಥೆಯೇ ಹೊಣೆಯಾಗಿದೆ. ಈ ಅಪಘಾತವನ್ನು ತಪ್ಪಿಸಬಹುದಿತ್ತು ಎಂದು ಅಪಘಾತದಲ್ಲಿ ಮೃತಪಟ್ಟಿರುವ ಮಹಿಳಾ ಪೈಲಟ್ ಕ್ಯಾಪ್ಟನ್ ಮಾರಿಯಾ ಝುಬೇರಿಯ ಅವರ ಪತಿ ಪಿ.ಕುಥಾರಿಯಾ ತಿಳಿಸಿದ್ದಾರೆ.
ವಿಮಾನವು ಜುಹು ಏರೋಡ್ರಾಮ್‌ನಿಂದ ಪರೀಕ್ಷಾ ಹಾರಾಟ ಆರಂಭಿಸುವುದಕ್ಕೂ ಮೊದಲು ತನಗೆ ಕರೆ ಮಾಡಿದ್ದ ಪತ್ನಿ, ಕೆಟ್ಟ ಹವಾಮಾನದ ಕಾರಣ ಈ ದಿನ ವಿಮಾನ ಪ್ರಯಾಣ ಸಾಧ್ಯವಾಗದು ಎಂದು ತಿಳಿಸಿದ್ದರು. ಆದರೆ ವಿಮಾನ ಪ್ರಯಾಣ ಆರಂಭಿಸಿದೆ. ಈ ದುರಂತಕ್ಕೆ ವಿಮಾನಯಾನ ಸಂಸ್ಥೆಯೇ ಹೊಣೆಯಾಗಿದೆ. ಇದನ್ನು ತಪ್ಪಿಸಬಹುದಿತ್ತು ಎಂದು ಕುಥಾರಿಯಾ ತಿಳಿಸಿದ್ದಾರೆ. ವಿಮಾನ ಅಪಘಾತದ ವಿಷಯವನ್ನು ಟಿವಿಯಲ್ಲಿ ನೋಡಿದ ಬಳಿಕ ಪತ್ನಿಗೆ ಸಂದೇಶ ಕಳುಹಿಸಿದೆ. ಆದರೆ ಆಗ ಅಪಘಾತದಲ್ಲಿ ಆಕೆಯೂ ಸೇರಿದಂತೆ ಐವರು ಮೃತಪಟ್ಟಿರುವ ಮಾಹಿತಿ ತಿಳಿದುಬಂತು ಎಂದವರು ಸುದ್ದಿಗಾರರಿಗೆ ತಿಳಿಸಿದರು.
ಪೈಲಟ್‌ಗಳು ತಮ್ಮ ಪ್ರಾಣತ್ಯಾಗ ಮಾಡಿ ಹಲವರ ಜೀವ ಉಳಿಸಿದ್ದಾರೆ. ವಿಮಾನವು ಶಾಲೆಯೊಂದರ ಮೇಲೆ ಪತನವಾಗುವುದನ್ನು ಪೈಲಟ್‌ಗಳು ತಪ್ಪಿಸಿದ್ದಾರೆ ಎಂದು ಕಥಾರಿಯಾ ಹೇಳಿದರು. ಅಪಘಾತಕ್ಕೀಡಾದ ವಿಮಾನ ಮುಂಬೈ ಮೂಲದ ಯು.ವೈ.ಏವಿಯೇಷನ್ ಪ್ರೈ.ಲಿ. ಸಂಸ್ಥೆಗೆ ಸೇರಿದೆ. ಅಪಘಾತ ನಡೆದ ಸ್ಥಳದಲ್ಲಿ ಕಟ್ಟಡವೊಂದರ ನಿರ್ಮಾಣ ಕಾಮಗಾರಿ ಸಾಗುತ್ತಿದ್ದು, ಇಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 30ರಷ್ಟು ಕಾರ್ಮಿಕರು ಊಟ ಮಾಡಲೆಂದು ಅಲ್ಲಿಂದ ತೆರಳಿದ್ದ ಕಾರಣ ಬದುಕುಳಿದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೈಲಟ್‌ಗಳಾದ ಮಾರಿಯಾ ಝುಬೇರಿ, ಕ್ಯಾ.ಪಿ.ಎಸ್.ರಜಪೂತ್, ವಿಮಾನದ ಮೈಂಟೆನೆನ್ಸ್ ಇಂಜಿನಿಯರ್, ಎರಡು ತಿಂಗಳ ಗರ್ಭಿಣಿಯಾಗಿದ್ದ ಸುರಭಿ, ಜ್ಯೂನಿಯರ್ ಟೆಕ್ನೀಷಿಯನ್ ಮನೀಶ್ ಪಾಂಡೆ ಹಾಗೂ ಓರ್ವ ಪಾದಾಚಾರಿ ಅಪಘಾತದಲ್ಲಿ ಮೃತರಾಗಿದ್ದರು.







