ಯುಎಇಯಿಂದ ಹಜ್ ವೆಚ್ಚ 50 ಶೇ.ಕ್ಕೂ ಅಧಿಕ ಕಡಿತ

ದುಬೈ, ಜೂ. 29: ಯುಎಇಯಿಂದ ಹಜ್ ಯಾತ್ರೆ ಕೈಗೊಳ್ಳುವವರಿಗೆ ಸಂತಸದ ಸುದ್ದಿ! ಅವರ ಯಾತ್ರೆಯ ವೆಚ್ಚ 50 ಶೇಕಡಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಗಿದೆ.
ಇಸ್ಲಾಮಿಕ್ ವ್ಯವಹಾರಗಳು ಮತ್ತು ದತ್ತಿ ಪ್ರಾಧಿಕಾರ ಇತ್ತೀಚೆಗೆ ಹಜ್ ಯಾತ್ರಿಕರಿಗಾಗಿ ಇಲೆಕ್ಟ್ರಾನಿಕ್ ವ್ಯವಸ್ಥೆಯನ್ನು ಘೋಷಿಸಿರುವುದು ಇದಕ್ಕೆ ಕಾರಣವಾಗಿದೆ.
ನೂತನ ವ್ಯವಸ್ಥೆಯು ಒಂದು ಅನುಕೂಲಕರ ಆನ್‌ಲೈನ್ ತಾಣದ ಮೂಲಕ ಹಜ್ ಯಾತ್ರೆಯ ಅರ್ಜಿಗಳ ಎಲ್ಲ ಇತ್ಯರ್ಥ ಪ್ರಕ್ರಿಯೆಯನ್ನು ನೆರವೇರಿಸುತ್ತದೆ. ಇದು ಹಜ್ ಏಜಂಟ್‌ಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.
ಹಿಂದಿನ ವರ್ಷಗಳಲ್ಲಿ ಹಜ್ ಯಾತ್ರೆಯ ವೆಚ್ಚ ಸರಾಸರಿ 40,000 ದಿರ್ಹಮ್ (ಸುಮಾರು 7.5 ಲಕ್ಷ ರೂಪಾಯಿ)ವರೆಗೆ ತಲುಪಿತ್ತು. ವಿಶೇಷ ಹಜ್ ಸೇವೆಗಳನ್ನು ಬಯಸುವವರಿಗೆ ವೆಚ್ಚವು 90,000 ದಿರ್ಹಮ್ (ಸುಮಾರು 16.80 ಲಕ್ಷ ರೂಪಾಯಿ)ವರೆಗೂ ಆಗುತ್ತಿತ್ತು.
ಈಗ ನೂತನ ವ್ಯವಸ್ಥೆ ಜಾರಿಗೆ ಬಂದ ಬಳಿಕ, ಯುಎಇ ನಿವಾಸಿಗಳು ಕೇವಲ 13,000 ದಿರ್ಹಮ್ (ಸುಮಾರು 2.5 ಲಕ್ಷ ರೂಪಾಯಿ) ಮೊತ್ತದಲ್ಲಿ ಹಜ್ ಯಾತ್ರೆಯನ್ನು ನಿರ್ವಹಿಸಬಹುದಾಗಿದೆ.





