ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ
ಸರಣಿ 2-0 ಕೈ ವಶ: ರಾಹುಲ್ 70, ರೈನಾ 69

ಡಬ್ಲಿನ್, ಜೂ.29: ಐರ್ಲೆಂಡ್ ವಿರುದ್ಧದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಭಾರತ 143 ರನ್‌ಗಳ ಭರ್ಜರಿ ಜಯ ಗಳಿಸಿದ್ದು, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಗೆಲುವಿಗೆ 214 ರನ್‌ಗಳ ಸವಾಲು ಪಡೆದ ಐರ್ಲೆಂಡ್ 12.3 ಓವರ್‌ಗಳಲ್ಲಿ 70 ರನ್‌ಗಳಿಗೆ ಆಲೌಟಾಗಿದೆ.
ಭಾರತ 213/4: 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 213 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟೀಮ್ ಇಂಡಿಯಾ ಪರ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ 70 ರನ್(36ಎ, 3ಬೌ,6ಸಿ) ಮತ್ತು ಸುರೇಶ್ ರೈನಾ 69 ರನ್(45ಎ, 5ಬೌ,3ಸಿ) ದಾಖಲಿಸಿ ಐರ್ಲೆಂಡ್‌ಗೆ ಕಠಿಣ ಸವಾಲು ವಿಧಿಸಲು ನೆರವಾದರು.
ತಂಡದ ಸ್ಕೋರ್ 2.4 ಓವರ್‌ಗಳಲ್ಲಿ 22 ರನ್‌ಗಳಾಗುವಷ್ಟರಲ್ಲಿ ಆರಂಭಿಕ ದಾಂಡಿಗ ನಾಯಕ ವಿರಾಟ್ ಕೊಹ್ಲಿ ಚೇಸ್ ಎಸೆತದಲ್ಲಿ ಡೊಕ್ರೇಲ್‌ಗೆ ಕ್ಯಾಚ್ ನೀಡಿದರು. ಎರಡನೇ ವಿಕೆಟ್‌ಗೆ ರಾಹುಲ್ ಮತ್ತು ರೈನಾ 106 ರನ್‌ಗಳ ಜೊತೆಯಾಟ ನೀಡಿದರು. ರಾಹುಲ್ 13ನೇ ಓವರ್‌ನ ಮೊದಲ ಎಸೆತದಲ್ಲಿ ಕೆವಿನ್ ಒ ಬ್ರಿಯಾನ್‌ಗೆ ರಿಟರ್ನ್ ಕ್ಯಾಚ್ ನೀಡಿ ವಾಪಸಾದರು. ಬಳಿಕ ಕ್ರೀಸ್‌ಗೆ ಆಗಮಿಸಿದ ರೋಹಿತ್ ಶರ್ಮಾ ಖಾತೆ ತೆರೆಯದೆ ನಿರ್ಗಮಿಸಿದರು. 17.3ನೇ ಓವರ್‌ನಲ್ಲಿ ಸುರೇಶ್ ರೈನಾ ಔಟಾದರು. ಐದನೇ ವಿಕೆಟ್‌ಗೆ ಮನೀಷ್ ಪಾಂಡೆ ಮತ್ತು ಹಾರ್ದಿಕ್ ಪಾಂಡ್ಯ ಮುರಿಯದ ಜೊತೆಯಾಟದಲ್ಲಿ 44 ರನ್ ಜಮೆ ಮಾಡಿದರು.
ಮನೀಶ್ ಪಾಂಡೆ ಔಟಾಗದೆ 21 ರನ್, ಹಾರ್ದಿಕ್ ಪಾಂಡ್ಯ ಔಟಾಗದೆ 32 ರನ್(9ಎ, 1ಬೌ,4ಸಿ) , ನಾಯಕ ವಿರಾಟ್ ಕೊಹ್ಲಿ 9ರನ್ ಗಳಿಸಿದರು. ರೋಹಿತ್ ಶರ್ಮಾ (0) ಖಾತೆ ತೆರೆಯದೆ ನಿರ್ಗಮಿಸಿದರು.
ಐರ್ಲೆಂಡ್ ತಂಡದ ಕೆವಿನ್ ಒ ಬ್ರಿಯನ್ 40ಕ್ಕೆ 3 ಮತ್ತು ಚೇಸ್ 42ಕ್ಕೆ 1 ವಿಕೆಟ್ ಪಡೆದರು.
ಟ್ವೆಂಟಿ -20: ಕನಿಷ್ಠ ಮೊತ್ತಕ್ಕೆ ಭಾರತ ವಿರುದ್ಧ ಆಲೌಟ್
70 ಐರ್ಲೆಂಡ್ , ಡಬ್ಲಿನ್, 2018*
80 ಇಂಗ್ಲೆಂಡ್ , ಕೊಲಂಬೊ ಆರ್ ಪಿಎಸ್ 2012
82 ಶ್ರೀಲಂಕಾ , ವಿಶಾಖಪಟ್ಟಣ , 2016
83 ಪಾಕಿಸ್ತಾನ , ಮಿರ್ಪುರ , 2016
86 ಆಸ್ಟ್ರೇಲಿಯ ಮಿರ್ಪುರ, 2014
87 ಶ್ರೀಲಂಕಾ , ಕಟಕ್, 2017
ಟ್ವೆಂಟಿ -20: ಭಾರತಕ್ಕೆ ವಿವಿಧ ತಂಡಗಳ ವಿರುದ್ಧ ಭಾರೀ ಅಂತರದಲ್ಲಿ ಗೆಲುವು
143- ಐರ್ಲೆಂಡ್, ಡಬ್ಲಿನ್, 2018*
93 - ಶ್ರೀಲಂಕಾ, ಕಟಕ್, 2017
90 -ಇಂಗ್ಲೆಂಡ್, ಕೊಲಂಬೊ ಆರ್ ಪಿಎಸ್ , 2012
88 -ಶ್ರೀಲಂಕಾ , ಇಂದೋರ್, 2017
76 -ಐರ್ಲೆಂಡ್, ಡಬ್ಲಿನ್ , 2018







