ಆಸ್ತಿ ವಿವಾದ; ಕೊಲೆ ಪ್ರಕರಣ- ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರು, ಜೂ.29: ಆಸ್ತಿ ವಿವಾದಕ್ಕೆ ಸಂಬಂಧಿಸಿ ನಡೆದ ಕೊಲೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಉಜಿರೆ ಅರಿಪ್ಪಾಡಿ ನಿವಾಸಿಗಳಾದ ಗಿರೀಶ್ (28) ಮತ್ತು ವೆಂಕಟೇಶ್(28) ಶಿಕ್ಷೆಗೊಳಗಾದ ಅಪರಾಧಿಗಳು. ಅಣ್ಣು ಮೊಗೇರ (36) ಕೊಲೆಯಾದ ವ್ಯಕ್ತಿ.
ಪ್ರಕರಣ ವಿವರ: ಉಜಿರೆ ಅರಿಪ್ಪಾಡಿ ನಿವಾಸಿ ಅಣ್ಣು ಮೊಗೇರ ಮತ್ತು ಅಪರಾಧಿಗಳಾದ ಗಿರೀಶ್, ವೆಂಕಟೇಶ್ ಕುಟುಂಬಗಳ ಮಧ್ಯೆ ಆಸ್ತಿ ಸಂಬಂಧಿತ ವ್ಯಾಜ್ಯಗಳಿದ್ದವು. ಸುಮಾರು 20 ವರ್ಷಗಳ ಕಾಲ ಈ ವ್ಯಾಜ್ಯ ಕೋರ್ಟ್‌ನಲ್ಲಿದ್ದು, ಹೈಕೋರ್ಟ್‌ಗೂ ದಾವೆ ಸಲ್ಲಿಸಲಾಗಿತ್ತು. ಅಣ್ಣು ಮೊಗೇರ ತಂದೆ ಪರವಾಗಿ ಕೋರ್ಟ್‌ಗೆ ಅಲೆದಾಡುತ್ತಿದ್ದ.
ಇದೇ ದ್ವೇಷದಿಂದ 2016ರ ನ.30ರಂದು ರಾತ್ರಿ 10:15ಕ್ಕೆ ಅಣ್ಣು ಮೊಗೇರ ಉಜಿರೆ ಪೇಟೆಯ ಸಮೀಪ ಬೈಕ್‌ನಲ್ಲಿ ಬಂದು ಇಳಿದಾಗ ಗಿರೀಶ್ ಮತ್ತು ವೆಂಕಟೇಶ್ ಏಕಾಏಕಿ ಚೂರಿಯಿಂದ ದಾಳಿ ನಡೆಸಿದ್ದಾರೆ. ಇದರ ಪರಿಣಾಮ ಅಣ್ಣು ಮೊಗೇರ ಅವರ ಬೆನ್ನು, ಎದೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂದರ್ಭ ಆರೋಪಿ ಗಿರೀಶ್‌ನ ಕೈಗೂ ಗಾಯವಾಗಿತ್ತು. ಆರೋಪಿಗಳನ್ನು ಘಟನೆ ನಡೆದ ಮರುದಿನ ಉಜಿರೆ ದೇವಸ್ಥಾನದ ಬಳಿ ಬಂಧಿಸಲಾಗಿತ್ತು.
ಕೊಲೆ ಪ್ರಕರಣದ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ, ಆರೋಪಿಗಳ ಕೊಲೆ ಆರೋಪ ಸಾಬೀತುಪಡಿಸಿ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ 4 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿದ್ದು, ರಕ್ತಸಿಕ್ತ ಬಟ್ಟೆ, ಬೈಕ್, ಸ್ಥಳದಲ್ಲಿರುವ ರಕ್ತದ ಕಲೆ ಸೇರಿದಂತೆ 19 ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಅಣ್ಣು ಮೊಗವೀರರ ಪತ್ನಿ ಸೌಮ್ಯಾ ಮತ್ತು ಮಗುವಿಗೆ 357(2)ರಡಿ ಜಿಲ್ಲಾಧಿಕಾರಿ ಪರಿಹಾರ ನಿಧಿಯಿಂದ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅರ್ಹರೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ಆರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.
ಎರಡು ತಿಂಗಳ ಹಿಂದೆ ಮದುವೆಯಾಗಿದ್ದ:
ಪ್ರಕರಣದ ಅಪರಾಧಿ ಗಿರೀಶ್ ಎಂಬಾತ ಜಾಮೀನಿನ ಮೇಲೆ ಬಿಡುಗಡೆಗೊಂಡು ಎರಡು ತಿಂಗಳ ಹಿಂದೆ ಮದುವೆಯಾಗಿದ್ದ. ಘಟನೆ ವೇಳೆ ಗಿರೀಶ್ ಕೈಗೂ ಗಾಯವಾಗಿದ್ದು, ಈ ಗುರುತು ಪ್ರಕರಣದ ಶಿಕ್ಷೆ ಸಾಬೀತಾಗಲು ಒಂದು ಕಾರಣವಾಯಿತು ಎಂದು ಮಾಹಿತಿ ದೊರಕಿದೆ.







