ಸ್ಥಿರವೋ, ಅಸ್ಥಿರವೋ ಜನರಿಗೆ ಒಳ್ಳೆಯದಾಗಬೇಕು : ಬಿಜೆಪಿ ಶಾಸಕ ವಿ.ಸೋಮಣ್ಣ
ಬೆಂಗಳೂರು, ಜೂ. 29: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅಸ್ಥಿರತೆಯ ಲಾಭ ಪಡೆಯುವ ಅವಶ್ಯಕತೆ ನಮಗಿಲ್ಲ. ಸ್ಥಿರವೋ, ಅಸ್ಥಿರವೋ ರಾಜ್ಯದ ಜನರಿಗೆ ಒಳ್ಳೆಯದಾಗಬೇಕು. ಅದು ಆಗದಿದ್ದರೆ ಜನತೆ ತೀರ್ಮಾನ ಮಾಡಲಿದ್ದಾರೆ ಎಂದು ಶಾಸಕ ವಿ.ಸೊಮಣ್ಣ ಎಚ್ಚರಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರ ಎಷ್ಟುದಿನ ನಡೆಯಲಿದೆಯೋ ನಡೆಯಲಿ. ಇದರಲ್ಲಿ ಬಿಜೆಪಿ ಏನೂ ಮಾಡುವುದಿಲ್ಲ. ಜೆಡಿಎಸ್ ವರಿಷ್ಠ ದೇವೇಗೌಡ ಅನುಭವಿ ರಾಜಕಾರಣಿ. ಇಂತಹದ್ದನ್ನು ಸಾಕಷ್ಟು ನೋಡಿದ್ದಾರೆ. ಅವರಿಗೆ ಎಲ್ಲಿ, ಹೇಗೆ ದಾಳ ಬೀಸಬೇಕೆಂಬುದು ಗೊತ್ತಿದೆ ಎಂದು ನುಡಿದರು.
ಮೈತ್ರಿ ಸರಕಾರದ ಬಜೆಟ್ ಮಂಡನೆ ಮಾಡಿದ ಕೂಡಲೇ ಎಲ್ಲವೂ ಸರಿ ಹೋಗುತ್ತದೆ ಎಂಬ ಗ್ರಹಿಕೆ ತಪ್ಪು. ಬಜೆಟ್‌ನಲ್ಲಿ ಘೋಷಿತ ಕಾರ್ಯಕ್ರಮಗಳ ಅನುಷ್ಠಾನ ಮುಖ್ಯ. ಘೋಷಿತ ಎಲ್ಲ ಯೋಜನೆಗಳು ಅನುಷ್ಠಾನಗೊಂಡಿದ್ದರೆ ನಮ್ಮ ರಾಜ್ಯ ರಾಮರಾಜ್ಯ ಆಗುತ್ತಿತ್ತು ಎಂದು ವಿಶ್ಲೇಷಿಸಿದರು.
ಸಾಮಾನ್ಯವಾಗಿ ನಾನು ಯಾರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಹೋಗುವುದಿಲ್ಲ. ಆದರೆ, ಅ.ದೇವೇಗೌಡರು ನನಗೆ ಆತ್ಮೀಯರು, ಪ್ರಯತ್ನ ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಅ.ದೇವೇಗೌಡ ಸಾಕ್ಷಿ. ಹೀಗಾಗಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ದೇನೆ ಎಂದು ಸ್ಮರಿಸಿದರು.







