ಉಡುಪಿ: ಕ್ಷಯ ರೋಗ ಪತ್ತೆ ಕಾರ್ಯಕ್ರಮ
ಉಡುಪಿ, ಜೂ.30: ಜಿಲ್ಲೆಯಲ್ಲಿ ಜುಲೈ 2ರಿಂದ 13ರವರೆಗೆ ಕ್ಷಯ ರೋಗ ಪತ್ತೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಶನಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪರಿಷ್ಕೃತ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಡಿ ಆಯೋಜಿಸಬೇಕಾದ ಕ್ಷಯ ರೋಗ ಪತ್ತೆ ಕಾರ್ಯಕ್ರಮ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.
ಜಿಲ್ಲೆಯಲ್ಲಿನ ಹೆಚ್ಚು ಕ್ಷಯ ರೋಗ ಕಾಣಿಸಿಕೊಳ್ಳುವಂತಹ ಪ್ರದೇಶಗಳಲ್ಲಿ ಮತ್ತು ಕ್ಷಯ ರೋಗಿಗಳು ಅಧಿಕ ಇರುವ ಪ್ರದೇಶದಲ್ಲಿ ಹೊಸ ಕ್ಷಯರೋಗಿ ಗಳನ್ನು ಪತ್ತೆ ಮಾಡುವ ಕುರಿತಂತೆ ಎಲ್ಲಾ ಮನೆಗಳಿಗೆ ತೆರಳಿ ಪರೀಕ್ಷೆ ಮಾಡಲಾಗುವುದು. ಪರೀಕ್ಷೆ ಮಾಡಿದವರಲ್ಲಿ ರೋಗ ಲಕ್ಷಣಗಳನ್ನು ಗುರುತಿಸಿ, ಅವರನ್ನು ಎಕ್ಸ್‌ರೇ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುವುದು ಎಂದರು.
ಈಗಾಗಲೇ ಕ್ಷಯ ರೋಗದಿಂದ ಗುಣಮುಖರಾಗಿರುವ ರೋಗಿಗಳಿದ್ದಲ್ಲಿ ಅವರ ಆರೋಗ್ಯ ಸ್ಥಿತಿಯನ್ನು ಸಹ ಪರೀಕ್ಷಿಸಿ ಇತರೇ ಸಮಸ್ಯೆಗಳಿದ್ದಲ್ಲಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೊರಗ ಸಮುದಾಯದವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರಲು ಅಗತ್ಯ ವಾಹನ ಸೌಲಭ್ಯ ಒದಗಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಪ್ರತಿ ತಿಂಗಳು ಸರಾಸರಿ 70ರಿಂದ 80 ಕ್ಷಯರೋಗ ಪ್ರಕರಣ ಪತ್ತೆಯಾಗುತಿದ್ದು, ಇಲಾಖೆಯಿಂದ ಸೂಕ್ತ ಚಿಕಿತ್ಸೆ ಹಾಗೂ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಚಿದಾನಂದ ಸಂಜು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಸ್ವಾಗತಿಸಿ, ವಂದಿಸಿದರು.







