ಹಾಲಿನ ಮಾದರಿ ಸಂಗ್ರಹಕ್ಕೆ ಆಗಮಿಸಿದ್ದ ಆರೋಗ್ಯಾಧಿಕಾರಿಗಳ ಮೇಲೆ ಹಲ್ಲೆ

ಮುಝಫ್ಫರ್‌ನಗರ, ಜೂ.30: ವ್ಯಾಪಾರಿಗಳು ಮಾರುವ ಹಾಲಿನ ಶುದ್ಧತೆಯನ್ನು ಪರಿಶೀಲಿಸಲು ಮಾದರಿಗಳನ್ನು ಸಂಗ್ರಹಿಸಲು ಆಗಮಿಸಿದ್ದ ಆರೋಗ್ಯಾಧಿಕಾರಿಗಳ ತಂಡದ ಮೇಲೆ ಸ್ಥಳೀಯರ ಗುಂಪು ಹಲ್ಲೆ ನಡೆಸಿದ ಘಟನೆ ಮುಝಫ್ಫರ್‌ನಗರದ ನಯಾ ಗಾಂವ್ ಗ್ರಾಮದಲ್ಲಿ ಶನಿವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಗ್ಯಾಧಿಕಾರಿಗಳ ಮೇಲೆ ದಾಳಿ ನಡೆಸಿದ ತಂಡ ಅವರು ಸ್ಥಳೀಯ ಹಾಲಿನ ವ್ಯಾಪಾರಿಗಳಾದ ಸಂತರ್ ಪಾಲ್ ಹಾಗೂ ಅಮರ್ ಪಾಲ್ ಅವರಿಂದ ಸಂಗ್ರಹಿಸಿದ್ದ ಹಾಲಿನ ಸ್ಯಾಂಪಲ್‌ಗಳನ್ನು ನಾಶ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಯಾ ಗಾಂವ್ ಗ್ರಾಮಕ್ಕೆ ತೆರಳಿದ್ದ ತಂಡದ ನೇತೃತ್ವವಹಿಸಿದ್ದ ಆರೋಗ್ಯಾಧಿಕಾರಿ ವಿನೀತ್ ಕುಮಾರ್ ಪ್ರಕಾರ, ಅಧಿಕಾರಿಗಳು ಹಾಲಿನ ಮಾದರಿಗಳನ್ನು ಸಂಗ್ರಹಿಸುವುದನ್ನು ಸಂತರ್ ಮತ್ತು ಅಮರ್ ಪಾಲ್ ವಿರೋಧಿಸಿದ್ದರು. ಅವರು ತಮ್ಮ ಬೆಂಬಲಿಗರ ಜೊತೆ ಸೇರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಸಂಗ್ರಹಿಸಿದ ಹಾಲಿನ ಮಾದರಿಗಳನ್ನು ನಾಶ ಮಾಡಿದ್ದಾರೆ. ಘಟನೆಯಲ್ಲಿ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ 20 ಜನರ ವಿರುದ್ಧ ದೂರು ದಾಖಲಿಸಲಾಗಿದ್ದು ಸಂತರ್ ಮತ್ತು ಅಮರ್ ಪಾಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





