‘ಅಪ್ಪೆ ಟೀಚರ್’ ವಿರುದ್ಧ ಮಹಿಳಾ ಮಂಡಲಗಳ ಒಕ್ಕೂಟದಿಂದ ಪ್ರತಿಭಟನೆ

ಮಂಗಳೂರು, ಜೂ.30: ‘ಅಪ್ಪೆ ಟೀಚರ್’ ತುಳು ಸಿನೆಮಾ ನೂರು ದಿನಗಳ ಪ್ರದರ್ಶನ ಕಂಡು ನಗರದ ಪುರಭವನದಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದ ಸಂದರ್ಭ, ಸಿನೆಮಾ ಮಹಿಳೆಯರನ್ನು ಅಶ್ಲೀಲವಾಗಿ ಚಿತ್ರಿಸಿ ಅವಹೇಳನ ಮಾಡಿದೆ ಎಂದು ಆರೋಪಿಸಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಚಿತ್ರ ತಂಡದ ವಿರುದ್ಧ ಮೌನ ಪ್ರತಿಭಟನೆ ನಡೆಸಿತು.
ಈ ಸಂಧರ್ಭ ಮಹಿಳಾ ಮಂಡಲಿಗಳ ಒಕ್ಕೂಟ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಕರಾವಳಿ ಲೇಖಕಿಯರ ಮತ್ತು ವಾಚಕರ ಸಂಘ, ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘ, ಸಹಕಾರ ಭಾರತಿ ಹಾಗೂ ಇತರ ಸಹಭಾಗಿ ಸಂಸ್ಥೆಗಳೊಂದಿಗೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಚಂದ್ರಕಲಾ ನಂದಾವರ, ಮಂಗಳೂರಿನ ಅನೇಕ ಮಹಿಳಾ ಸಂಘಟನೆಗಳು ಸೇರಿ ತುಳು ಚಿತ್ರದಲ್ಲಿರುವ ಅತ್ಯಾಚಾರ ವಿಷಯದ ಬಗ್ಗೆ ಪ್ರತಿಭಟಿಸಲು ಒಟ್ಟು ಸೇರಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಈ ಕುರಿತು ಸಿನೆಮಾ ತಂಡದಿಂದ ಸಾರ್ವಜನಿಕವಾಗಿ ಕ್ಷಮೆಯಾಚಿಸಿಲು ತಿಳಿಸಿದ್ದೇವೆ. ಚಿತ್ರತಂಡ ಇದುವರೆಗೆ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮಾಪಣೆ ಕೇಳಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮಹಿಳಾ ಮಂಡಳಿ ಅಧ್ಯಕ್ಷೆ ಚಂಚಲ ತೇಜೋಮಯ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಕೋಶಾಧಿಕಾರಿ ಗುಲಾಬಿ ಬಿಳಿಮಲೆ, ಒಕ್ಕೂಟದ ಸ್ಥಾಪಕಾಧ್ಯಕ್ಷೆ ಕೆ.ಎ. ರೋಹಿನಿ, ಸುಮನ ಮತ್ತಿತರರು ಉಪಸ್ಥಿತರಿದ್ದರು.
‘ಅಪ್ಪೆ ಟೀಚರ್-ಶೋಕಾಚರಣೆ’
ಅಪ್ಪೆ ಟೀಚರ್ ಶತದಿನದ ಸಂಭ್ರಮಾಚರಣೆಯನ್ನು ಮಹಿಳಾ ಮಂಡಳಗಳ ಒಕ್ಕೂಟದಿಂದ ಶೋಕಾಚರಣೆಯನ್ನು ಆಚರಿಸುತ್ತಿದ್ದೇವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು, ಅತ್ಯಾಚಾರ, ಅಶ್ಲೀಲ ಸಂಭಾಷಣೆಗಳನ್ನು ಒಳಗೊಂಡಂತಹ ಈ ಸಿನೆಮಾ ಸಮಸ್ತ ಮಹಿಳೆಯ ಜೊತೆ ಪುರುಷರಿಗೂ ಮುಜುಗರವನ್ನುಂಟು ಮಾಡಿದೆ. ಇನ್ನು ಮುಂದೆ ಇಂತಹ ಸಿನೆಮಾಗಳು ಬರಬಾರದು. ಚಿತ್ರದಲ್ಲಿರುವ ಕೆಲವು ದೃಶ್ಯಗಳನ್ನು ಮರು ಸೆನ್ಸಾರ್ ಮಂಡಳಿಗೆ ನೀಡಬೇಕು ಎಂದು ಮಹಿಳಾ ಮಂಡಳಿ ಒಕ್ಕೂಟದ ಉಪಾಧ್ಯಕ್ಷೆ ಸುಖಲಾಕ್ಷಿ ವೈ ಸುವರ್ಣ ಆಗ್ರಹಿಸಿದ್ದಾರೆ.







