ಮಕ್ಕಳ ಕಳ್ಳಿ ಎಂಬ ಶಂಕೆ: ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ

ಸೊನಿತ್‌ಪುರ (ಅಸ್ಸಾಂ), ಜೂ.30: ಮಕ್ಕಳ ಕಳ್ಳಿ ಎಂಬ ಅನುಮಾನದಲ್ಲಿ ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ ಅಸ್ಸಾಂನ ಸೊನಿತ್‌ಪುರ ಜಿಲ್ಲೆಯಲ್ಲಿ ನಡೆದಿದ್ದು, ಕೆಲವು ಸ್ಥಳೀಯರ ಮಧ್ಯಪ್ರವೇಶದಿಂದಾಗಿ ಆಕೆಗೆ ಥಳಿಸುವುದನ್ನು ನಿಲ್ಲಿಸಲಾಯಿತು ಮತ್ತು ಪೊಲೀಸರಿಗೆ ಕರೆ ಮಾಡಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಸೊನಿತ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನುಮಲ್ ಮಹತ್ತ, ಮಹಿಳೆಯೊಬ್ಬರು ಗ್ರಾಮಸ್ಥರ ವಶದಲ್ಲಿದ್ದಾರೆ ಎಂಬ ಕರೆಯು ನಮಗೆ ರಾತ್ರಿ ಹನ್ನೊಂದು ಗಂಟೆಗೆ ಬಂದಿತ್ತು. ನಾವು ಸ್ಥಳಕ್ಕೆ ತೆರಳಿದಾಗ ಮಹಿಳೆಯ ಮುಖದಲ್ಲಿ ಗಾಯಗಳಾಗಿದ್ದವು. ಆಕೆಗೆ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಆಕೆ ತನ್ನ ವಿವರವನ್ನು ನೀಡಲು ವಿಫಲವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಕ್ಕಳ ಕಳ್ಳರ ಬಗ್ಗೆ ವದಂತಿಗಳು ಹರಡಿದ್ದು, ಜನರು ಆತಂಕದಲ್ಲಿದ್ದಾರೆ. ಮಹಿಳೆಯು ಹೊರಗಿನಿಂದ ಬಂದವರಂತೆ ಕಾಣುತ್ತಿದ್ದು, ಇದರಿಂದಾಗಿ ಜನರು ಅನುಮಾನ ಪಡುವಂತಾಗಿದೆ. ಸ್ಥಳೀಯರು ಆಕೆ ಬಿಹಾರ ಅಥವಾ ಸ್ಥಳೀಯ ಆದಿವಾಸಿ ಜನಾಂಗಕ್ಕೆ ಸೇರಿದವರಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ನುಮಲ್ ತಿಳಿಸಿದ್ದಾರೆ. ಸದ್ಯ ಮಹಿಳೆಯನ್ನು ತೇಜ್‌ಪುರ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈವರೆಗೆ ಯಾರೂ ದೂರು ನೀಡಲು ಮುಂದೆ ಬಾರದ ಕಾರಣ ನಾವೇ ತನಿಖೆ ನಡೆಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.







