ಮಂಗಳೂರು ವಿವಿ ಕಾಲೇಜಿನಲ್ಲಿ ‘ತೆರೆದ ಮನೆ’ ಕಾರ್ಯಕ್ರಮ

ಮಂಗಳೂರು, ಜೂ.30: ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ವಿವಿ ಕಾಲೇಜು ಹಾಗೂ ವಿವಿ ಸಂಧ್ಯಾ ಕಾಲೇಜುಗಳ ವಿವಿಧ ಸ್ನಾತಕೋತ್ತರ ಪದವಿ ವಿಭಾಗಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಪರಿಚಯಿಸಲು ನಿಟ್ಟಿನಲ್ಲಿ ಶನಿವಾರ ವಿವಿ ಕಾಲೇಜಿನ ಸಭಾಂಗಣದಲ್ಲಿ ‘ತೆರೆದ ಮನೆ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಉಪಕುಲಪತಿ ಪ್ರೊ. ಕಿಶೋರ್ ಕುಮಾರ್ ಸಿ.ಕೆ. ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ವಿನೂತನ ಕಾರ್ಯಕ್ರಮ ಇದಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು. ಪ್ರಸ್ತುತ ವರ್ಷದಿಂದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆರಂಭವಾಗಿರುವ ಎಂ.ಎ. ಇತಿಹಾಸ ಮತ್ತು ಪುರಾತತ್ವ, ಹಾಗೂ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಎಂ.ಎ. ತುಳು ಹಾಗೂ ಎಂ.ಎ. ಇಂಗ್ಲಿಷ್ ಪದವಿಗಳ ಮಹತ್ವವನ್ನು ವಿವರಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಪ್ರಸ್ತುತ ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಆಯ್ಕೆ ಮಾಡುವಲ್ಲಿ ಇರುವ ಗೊಂದಲಗಳನ್ನು ನಿವಾರಿಸಲು ‘ತೆರೆದ ಮನೆ’ಯಂತಹ ಕಾರ್ಯಕ್ರಮ ಉಪಯುಕ್ತ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ವಿಶ್ವವಿದ್ಯಾನಿಲಯ ಕ್ಯಾಂಪಸ್ ಸಹಿತ ಘಟಕ ಕಾಲೇಜುಗಳಲ್ಲಿರುವ ಸ್ನಾತಕೋತ್ತರ ಅಧ್ಯಯನಕ್ಕಾಗಿ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿಯನ್ನು ಪಡೆದುಕೊಂಡರು. ವಿಜ್ಞಾನ, ಮಾನವಿಕ, ವಾಣಿಜ್ಯ ಮತ್ತು ನಿರ್ವಹಣೆ, ಹಾಗೂ ಶಿಕ್ಷಣ ಅಧ್ಯಯನಗಳನ್ನೊಳಗೊಂಡಂತೆ ವಿವಿಧ ಸ್ನಾತಕೋತ್ತರ ಪದವಿಗಳ ಬಗ್ಗೆ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಪಡೆದುಕೊಂಡರು.
ತೆರೆದ ಮನೆ ಕಾರ್ಯಕ್ರಮದ ಸಂಯೋಜಕ ಡಾ.ಎ.ಸಿದ್ಧೀಕ್ ಉಪಸ್ಥಿತರಿದ್ದರು. ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ. ಸ್ವಾಗತಿಸಿದರು. ವಿವಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಬಿ.ಎಂ. ವಂದಿಸಿದರು. ಸ್ನಾತಕೋತ್ತರ ಅರ್ಥಶಾಸ ವಿಭಾಗದ ಸಂಯೋಜಕ ಡಾ. ಜಯವಂತ ನಾಯಕ್ ಕಾರ್ಯಕ್ರಮ ನಿರೂಪಿಸಿದರು.







