ಉಳ್ಳಾಲದ ಮಿಲ್ಲತ್ನಗರ ಕಲುಷಿತ ನೀರು ಸರಬರಾಜು: ಸಾರ್ವಜನಿಕರ ಆರೋಪ
ಮಂಗಳೂರು, ಜೂ. 30: ಉಳ್ಳಾಲ ನಗರಸಭೆ ವ್ಯಾಪ್ತಿಯ ಮಿಲ್ಲತ್ ನಗರದಲ್ಲಿ ಸುಮಾರು 200ರಷ್ಟು ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬದ ಸದಸ್ಯರಿಗೆ ಸಮರ್ಪಕ ನೀರು ಪೂರೈಕೆ ಇಲ್ಲದೆ, ಕಲುಷಿತ ನಳ್ಳಿ ನೀರು ಪೂರೈಕೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಗರಸಭೆಯ ವತಿಯಿಂದ ಸ್ಥಳೀಯ ಕೊಳವೆ ಬಾವಿಯಿಂದ ಪಂಪ್ ಮೂಲಕ ಶೇಖರಿಸಿದ ನೀರು ಸಂಪೂರ್ಣ ಕಲುಷಿತವಾಗಿದೆ. ಕಸಮಿಶ್ರಿತ, ಪಾಚಿಗಟ್ಟಿದ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕ ಆರೋಗ್ಯಕ್ಕೆ ತೀವ್ರ ಹಾನಿಯಾಗುತ್ತಿದೆ. ಮಿಲ್ಲತ್ ನಗರ ಪ್ರದೇಶಕ್ಕೆ ಇತರ ಯಾವುದೇ ಪರ್ಯಾಯ ನೀರು ಪೂರೈಕೆಯ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ಕಂಗಾಲಾಗಿದ್ದಾರೆ. ಈ ಹಿಂದೆ ಸಾರ್ವಜನಿಕ ಶಿಥಿಲ ಬಾವಿಯೊಂದನ್ನು ಅಗಾಧ ಮೊತ್ತ ವಿನಿಯೋಗಿಸಿ ನಗರಸಭೆ ಪುನಃ ನಿರ್ಮಿಸಿತ್ತು. ಖಾಸಗಿ ವ್ಯಕ್ತಿಯ ಮನೆಯ ಹತ್ತಿರವಿರುವ ಶೌಚಗುಂಡಿ ಕೂಡ ಈ ಬಾವಿಯ ಹತ್ತಿರವಿರುವ ಕಾರಣ ನೀರು ಮಲಿನಗೊಂಡಿರುವ ಅಪಾಯವಿದೆ. ಹಾಗಾಗಿ ಸ್ಥಳೀಯರಾದ ಹುಸೈನ್ ಮಿಲ್ಲತ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ನಗರ ಸಭೆ ಮುಖ್ಯಾಧಿಕಾರಿ, ಸಚಿವರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ.