ತುಳು ಅಕಾಡಮಿಯ ಗೌರವ ಪ್ರಶಸ್ತಿ ಪ್ರದಾನ

ಮಂಗಳೂರು, ಜೂ.30: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪ್ರದಾನ ಹಾಗೂ 2017ನೆ ಸಾಲಿನ ಪುಸ್ತಕ ಬಹುಮಾನ ವಿತರಣಾ ಕಾರ್ಯಕ್ರಮ ಶನಿವಾರ ಉರ್ವಸ್ಟೋರ್‌ನ ತುಳುಭವನದ ಸಿರಿ ಚಾವಡಿಯಲ್ಲಿ ನಡೆಯಿತು.
ತುಳು ಯಕ್ಷಗಾನ ಕ್ಷೇತ್ರದ ಡಾ. ಶಿಮಂತೂರು ನಾರಾಯಣ ಶೆಟ್ಟಿ, ತುಳು ಜಾನಪದ ಕ್ಷೇತ್ರದ ಸೇಸಪ್ಪ ಪಂಬದ, ತುಳು ಸಾಹಿತ್ಯ ಕ್ಷೇತ್ರದ ಶಕುಂತಳಾ ಭಟ್ ಅವರಿಗೆ ಗೌರವ ಪ್ರಶಸ್ತಿ ಹಾಗೂ ಕಥಾ ವಿಭಾಗದಲ್ಲಿ ಚಂದ್ರಹಾಸ ಸುವರ್ಣ ಅವರಿಗೆ ಪುಸ್ತಕ ಬಹುಮಾನವನ್ನು ಪ್ರದಾನ ಮಾಡಲಾಯಿತು.
ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಮಾತನಾಡಿ ಪಠ್ಯಪುಸ್ತಕದಲ್ಲಿ ತುಳುಭಾಷೆಯು ಮೂಡಿಬರುತ್ತಿರುವುದು ಭಾಷೆಗೆ ಸಂದ ಹಿರಿಮೆಯಾಗಿದೆ. ವಿದೇಶಗಳಿಗೆ ತುಳು ಭಾಷೆಯನ್ನು ವಿಸ್ತರಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.
ತುಳು ಭಾಷೆಯಲ್ಲಿಲ್ಲದ ವಿಚಾರಗಳಿಲ್ಲ. ಎಲ್ಲ ಭಾಷೆಗಳಿಗೂ ತುಳು ನಿಕಟವಾಗಿದೆ. ತುಳುಸಾಹಿತ್ಯವನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆಗೊಳಿಸುವ ಕೆಲಸ ನಡೆದಿರುವುದು ಆರೋಗ್ಯಕರ ಬೆಳವಣಿಗೆ ಎಂದು ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅಕಾಡಮಿ ಅಧ್ಯಕ್ಷ ಎ. ಸಿ. ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ರಾಜೇಶ್ ಜಿ., ಮೇಯರ್ ಭಾಸ್ಕರ ಕೆ., ಕಾರ್ಪೊರೇಟರ್ ರಾಧಾಕೃಷ್ಣ ಉಪಸ್ಥಿತರಿದ್ದರು.
ಸದಸ್ಯ ತಾರನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು.







