ಜಪಾನ್: ಖಾಸಗಿ ರಾಕೆಟ್ ಉಡಾವಣೆಗೊಂಡ ಕ್ಷಣಗಳಲ್ಲೇ ಸ್ಫೋಟ

ಟೋಕಿಯೊ (ಜಪಾನ್), ಜೂ. 30: ಜಪಾನಿ ಉದ್ಯಮಿಯೊಬ್ಬ ಅಭಿವೃದ್ಧಿಪಡಿಸಿದ ರಾಕೆಟೊಂದು ಶನಿವಾರ ಉಡಾವಣೆಯ ಸ್ವಲ್ಪ ಹೊತ್ತಿನ ಬಳಿಕ ಸ್ಫೋಟಿಸಿದ್ದು, ಜಪಾನ್‌ನ ಖಾಸಗಿ ಮಾಲಕತ್ವದ ಪ್ರಥಮ ರಾಕೆಟೊಂದನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ.
ಪ್ರಸಿದ್ಧ ಇಂಟರ್‌ನೆಟ್ ಸೇವಾ ಪೂರೈಕೆದಾರ ‘ಲೈವ್‌ಡೋರ್’ ಸ್ಥಾಪಕ ಟಕಫುಮಿ ಹೊರೀ ಸ್ಥಾಪಿಸಿದ ‘ಇಂಟರ್‌ಸ್ಟೆಲ್ಲಾರ್ ಟೆಕ್ನಾಲಜೀಸ್’, ಶನಿವಾರ ಮುಂಜಾನೆ 5:30ಕ್ಕೆ ದಕ್ಷಿಣ ಹೊಕಾಯಿಡೊದ ಟೈಕಿಯಲ್ಲಿರುವ ಪರೀಕ್ಷಾ ಸ್ಥಳದಿಂದ ಮಾನವರಹಿತ ರಾಕೆಟ್ ‘ಮೊಮೊ-2’ನ್ನು ಉಡಾಯಿಸಿದೆ.
ಆದರೆ, ಉಡಾವಣೆಗೊಂಡ ಕೆಲವೇ ಸೆಕೆಂಡ್‌ಗಳಲ್ಲಿ 10 ಮೀಟರ್ ಉದ್ದದ ರಾಕೆಟ್ ಬೆಂಕಿ ಜ್ವಾಲೆಗಳೊಂದಿಗೆ ಉಡಾವಣಾ ಸ್ಥಳದತ್ತ ಮರಳಿ ಬರುತ್ತಿರುವುದನ್ನು ಟೆಲಿವಿಶನ್ ಚಿತ್ರಗಳು ತೋರಿಸಿದವು.
ಈ ಹಾರಾಟದ ವೇಳೆ ರಾಕೆಟ್, ವೀಕ್ಷಣಾ ಉಪಕರಣವೊಂದನ್ನು 100 ಕಿ.ಮೀ. ಎತ್ತರಕ್ಕೆ ಒಯ್ಯಬೇಕಾಗಿತ್ತು. ಹೊರೀ 2013ರಲ್ಲಿ ‘ಇಂಟರ್‌ಸ್ಟೆಲ್ಲಾರ್ ಟೆಕ್ನಾಲಜೀಸ್’ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
Next Story







