ಶಾಲಾ-ಕಾಲೇಜಿನ ನಿಯಮಗಳ ಬಗ್ಗೆ ಸರಕಾರ ಮಾರ್ಗದರ್ಶಿ ಸೂತ್ರ ರಚಿಸಲಿ: ಎಸ್ಐಒ
ಮಂಗಳೂರು, ಜೂ. 30: ಶಾಲಾ-ಕಾಲೇಜುಗಳ ನಿಯಮಗಳ ಬಗ್ಗೆ ಸರಕಾರವು ಶೀಘ್ರವೇ ಮಾರ್ಗದರ್ಶಿ ಸೂತ್ರವನ್ನು ರಚಿಸಿ, ಆದೇಶ ಹೊರಡಿಸಬೇಕೆಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್ಐಒ) ಆಗ್ರಹಿಸಿದೆ.
ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರಲ್ಲಿ ನಡೆಯುತ್ತಿರುವ ಸ್ಕಾರ್ಫ್ ವಿವಾದದ ಹಿನ್ನೆಲೆಯಲ್ಲಿ ಸರಕಾರವು ಈ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಎಸ್ಐಒ ಒತ್ತಾಯಿಸಿದೆ.
ಪ್ರಸ್ತುತ ನಡೆಯುತ್ತಿರುವ ಸ್ಕಾರ್ಫ್ ವಿವಾದವು ಕೋಮು ಧೃವೀಕರಣಕ್ಕೆ ಸಾಕ್ಷಿಯಾಗುವುದಕ್ಕಿಂತ ಮುಂಚಿತವಾಗಿ ಕಾಲೇಜಿನ ಆಡಳಿತ ವರ್ಗ, ಹೆತ್ತವರು ಮತ್ತು ವಿದ್ಯಾರ್ಥಿಗಳು ಸಮಸ್ಯೆಯ ಆಳವನ್ನು ಅರಿತು ಶೀಘ್ರವಾಗಿ ಇತ್ಯರ್ಥಪಡಿಸಲು ಮುಂದಾಗಬೇಕು ಎಂದು ಎಸ್ಐಒ ಮನವಿ ಮಾಡಿದೆ.
ಸ್ಕಾರ್ಫ್ ನಂತಹ ವಿವಾದಗಳು ಮರುಕಳಿಸಿದಂತೆ ಮುಂದಾಲೋಚಿಸಿ, ವೈಯಕ್ತಿಕ ಹಾಗೂ ಮಾನವ ಹಕ್ಕಿಗೆ ಧಕ್ಕೆಯಾಗದಂತೆ ಶಾಲಾ-ಕಾಲೇಜುಗಳ ನಿಯಮಾವಳಿಗಳನ್ನು ರಚಿಸಲು ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿಯನ್ನು ಮಾಡಿ, ಸಂಬಂಧಿಸಿದ ಇಲಾಖೆಗೆ ಸರಕಾರವು ಮಾರ್ಗದರ್ಶನ ನೀಡುವುದರ ಮೂಲಕ ಮಾರ್ಗದರ್ಶಿ ಸೂತ್ರವನ್ನು ರಚಿಸಿ, ಆದೇಶ ಹೊರಡಿಸಬೇಕೆಂದು ಎಸ್ಐಒ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸಿದೆ.





