24 ಪತ್ನಿಯರು, 149 ಮಕ್ಕಳಿರುವ ವ್ಯಕ್ತಿಗೆ ಗೃಹಬಂಧನ ಶಿಕ್ಷೆ

ವಿಕ್ಟೋರಿಯ (ಕೆನಡ), ಜೂ. 30: ಬಹುಪತ್ನಿತ್ವದ ಅಪರಾಧಕ್ಕಾಗಿ ಕೆನಡದ ಬ್ರಿಟಿಷ್ ಕೊಲಂಬಿಯ ರಾಜ್ಯದ ಸುಪ್ರೀಂ ಕೋರ್ಟ್ ಇಬ್ಬರು ಪುರುಷರಿಗೆ ಶರತ್ತುಬದ್ಧ ಶಿಕ್ಷೆಗಳನ್ನು ವಿಧಿಸಿದೆ. ಆದರೆ, ಅವರು ಜೈಲು ಶಿಕ್ಷೆಯಿಂದ ಪಾರಾಗಿದ್ದಾರೆ.
ವಿನ್‌ಸ್ಟನ್ ಬ್ಲಾಕ್‌ಮೋರ್‌ಗೆ 24 ಹೆಂಡತಿಯರು ಇರುವುದು ಸಾಬೀತಾದರೆ, ಜೇಮ್ಸ್ ಓಲರ್ ಐವರು ಹೆಂಡತಿಯರೊಂದಿಗೆ ಸಂಸಾರ ನಡೆಸುತ್ತಿರುವುದು ಪತ್ತೆಯಾಗಿದೆ.
ಬ್ಲಾಕ್‌ಮೋರ್‌ಗೆ 6 ತಿಂಗಳ ಶರತ್ತುಬದ್ಧ ಶಿಕ್ಷೆ ವಿಧಿಸಲಾಗಿದ್ದು, ಗೃಹಬಂಧನದಲ್ಲಿ ಅದನ್ನು ಅನುಭವಿಸಬೇಕಾಗಿದೆ. ಆದಾಗ್ಯೂ, ಆತ ಕೆಲಸಕ್ಕೆ ಹೋಗಬಹುದು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ಹೊರ ಹೋಗಬಹುದು. ಓಲರ್ 3 ತಿಂಗಳ ಗೃಹಬಂಧನದಲ್ಲಿರಬೇಕಾಗಿದೆ. ಬಳಿಕ ಇಬ್ಬರೂ 12 ತಿಂಗಳ ನಿರೀಕ್ಷಣೆಯಲ್ಲಿರುತ್ತಾರೆ. 61 ವರ್ಷದ ಬ್ಲಾಕ್‌ಮೋರ್‌ಗೆ 149 ಮಕ್ಕಳಿದ್ದಾರೆ.
ಈ ಇಬ್ಬರೂ ವ್ಯಕ್ತಿಗಳು ವಿಶಿಷ್ಟ ಪಂಥವೊಂದನ್ನು ಅನುಸರಿಸುತ್ತಿದ್ದು, ಅದರ ನಿಯಮಗಳಂತೆ ಇಷ್ಟು ಸಂಖ್ಯೆಯಲ್ಲಿ ಮದುವೆಯಾಗಿದ್ದಾರೆ.
ಬ್ಲಾಕ್‌ಮೋರ್ 150 ಗಂಟೆಗಳ ಸಮುದಾಯ ಸೇವಾ ಕೆಲಸ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. ಓಲರ್ 75 ಗಂಟೆಗಳ ಸಮಾಜ ಸೇವೆ ಮಾಡಬೇಕಾಗಿದೆ.





