ದಿಲ್ಲಿಯಲ್ಲಿ ನಕಲಿ ಆಧಾರ್ ಕಾರ್ಡ್ ದಂಧೆ ಬಯಲು

ಹೊಸದಿಲ್ಲಿ, ಜೂ. 30: ಉತ್ತರ ದಿಲ್ಲಿಯ ಶಾಸ್ತ್ರಿ ನಗರ ಪ್ರದೇಶದಲ್ಲಿ ನಕಲಿ ಆಧಾರ್ ಕಾರ್ಡ್ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಅವರಲ್ಲಿದ್ದ ಜಿಲ್ಲಾ ದಂಡಾಧಿಕಾರಿ (ಪೂರ್ವ) ಅವರ ನಕಲಿ ರಬ್ಬರ್ ಸ್ಟಾಂಪ್, ನಕಲಿ ಅಫಿದಾವಿತ್, ವಿವಿಧ ಹೆಸರುಳ್ಳ ಪೂರ್ಣವಾಗಿ ಸಿದ್ಧಗೊಂಡಿರುವ 57 ನಕಲಿ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಹಾಗೂ 461 ಆಧಾರ್ ಕಾರ್ಡ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳನ್ನು ವಿಕಾಸ್ ಕುಮಾರ್ (27) ಹಾಗೂ ಸುಶೀಲ್ ಕುಮಾರ್ (25) ಎಂದು ಗುರುತಿಸಲಾಗಿದೆ. ಜೂನ್ 26ರಂದು ದೊರಕಿದ ಖಚಿತ ಮಾಹಿತಿ ಹಿನ್ನಲೆಯಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಅಂಗಡಿಗೆ ನಕಲಿ ಗ್ರಾಹಕನನ್ನು ಕಳುಹಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಫೋಟೊಸ್ಟಾಟ್, ಸ್ಕಾನಿಂಗ್, ಆಧಾರ್ ಕಾರ್ಡ್‌ಗಳನ್ನು ಮಾಡಲು 2013ರಲ್ಲಿ ನಾನು ಸ್ವಂತ ಅಂಗಡಿ ಆರಂಭಿಸಿದೆ ಎಂದು ವಿಚಾರಣೆ ವೇಳೆ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾನೆ. ಇವರಿಬ್ಬರು ಒಂದು ಆಧಾರ್ ಕಾರ್ಡ್‌ಗೆ ಗ್ರಾಹಕರಿಗೆ ರೂ. 400ರಿಂದ 500 ಶುಲ್ಕ ವಿಧಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.







