ಕಾಶ್ಮೀರ: ಅಪಾಯಮಟ್ಟ ಮೀರಿದ ಝೇಲಂ ನದಿ

ಶ್ರೀನಗರ, ಜೂ.30: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಕ್ಷಿಣ ಮತ್ತು ಕೇಂದ್ರ ಕಾಶ್ಮೀರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದ್ದು ಝೇಲಂ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಮುಂಜಾಗರೂಕತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಶನಿವಾರ ಬೆಳಿಗ್ಗೆ ಝೇಲಂ ನದಿಯ ಸಂಗಮ ಕ್ಷೇತ್ರವಾದ ದಕ್ಷಿಣ ಕಾಶ್ಮೀರ ಹಾಗೂ ರಾಮ್ ಮುನ್ಶಿಬಾಘ್‌ನಲ್ಲಿ ನದಿಯ ನೀರು ಮಟ್ಟ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ. ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಅಪಾಯದ ಮಟ್ಟವಾದ 21 ಅಡಿ ಮೀರಿ 21.33 ಅಡಿಗೆ ನೀರು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀನಗರದಲ್ಲಿ ನಡೆದ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ರಾಮ್ ಮುನ್ಶಿಬಾಘ್ ಪ್ರದೇಶದಲ್ಲಿ ಝೇಲಂ ನದಿಯ ತೀರದಲ್ಲಿ ವಾಸಿಸುತ್ತಿರುವ ಜನರಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಕಣಿವೆ ರಾಜ್ಯದಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶನಿವಾರ ಬೆಳಿಗ್ಗಿನಿಂದ ರಾಜ್ಯದ ತೊರೆ, ಹೊಳೆ ಹಾಗೂ ನದಿಯ ನೀರಿನ ಪ್ರಮಾಣ ಗಂಟೆಗೆ ಒಂದು ಅಡಿಯಂತೆ ಏರಿಕೆಯಾಗುತ್ತಿದ್ದು ಜನತೆ 2014ರ ನೆರೆಹಾವಳಿ ಮರುಕಳಿಸಬಹುದೆಂಬ ಭೀತಿಯಲ್ಲಿದ್ದಾರೆ.
ಅಮರನಾಥ ಯಾತ್ರೆ ಅಮಾನತು
ಕಣಿವೆ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡೂ ದಾರಿಯಲ್ಲಿ ಸಾಗುವ ಅಮರನಾಥ ಯಾತ್ರೆಯನ್ನು ಅಮಾನತುಗೊಳಿಸಲಾಗಿದೆ. ಎರಡೂ ದಾರಿಯ ಮೂಲಶಿಬಿರಗಳಲ್ಲಿ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





