ಜಿಎಸ್ ಟಿ ದಿನಾಚರಣೆ: 'ಒಟ್ಟಾರೆ ಭಯಾನಕ ತೆರಿಗೆ' ಎಂದ ಕಾಂಗ್ರೆಸ್

ಹೊಸದಿಲ್ಲಿ, ಜು.1: ಜುಲೈ ಒಂದನ್ನು ದೇಶಾದ್ಯಂತ ಜಿಎಸ್‍ಟಿ ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಜನರನ್ನು ಅಭಿನಂದಿಸಿದ್ದಾರೆ. ಕಳೆದ ವರ್ಷದ ಈ ದಿನದಂದು ಜಾರಿಗೊಳಿಸಿದ ಈ ತೆರಿಗೆ ವಿಧಾನ ಕ್ರಾಂತಿಕಾರಕ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇದನ್ನು ಟೀಕಿಸಿದ್ದು, ಇದು ತರಾತುರಿಯ ಕ್ರಮ ಹಾಗೂ ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ ಎಂದು ಆಪಾದಿಸಿವೆ.
ಪ್ರಧಾನಿ ಮೋದಿ ರವಿವಾರ ಮುಂಜಾನೆಯೇ ಟ್ವೀಟ್ ಮಾಡಿ, ಇದು ಆತ್ಯದ್ಭುತ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ನಿದರ್ಶನ ಎಂದು ಬಣ್ಣಿಸಿದ್ದಾರೆ. ಇದು ಟೀಮ್ ಇಂಡಿಯಾ ಮನೋಭಾವವನ್ನು ಬೆಳೆಸುವ ಜತೆಗೆ ದೇಶದ ಆರ್ಥಿಕತೆಯಲ್ಲಿ ಧನಾತ್ಮಕ ಬದಲಾವಣೆ ತಂದಿದೆ ಎಂದು ಹೇಳಿದ್ದಾರೆ.
ಬಹುಸ್ತರದ, ಸಂಕೀರ್ಣ ತೆರಿಗೆ ರಚನೆಯನ್ನು ಕೇಂದ್ರ ಹಾಗೂ ರಾಜ್ಯಮಟ್ಟದಲ್ಲಿ ಜಿಎಸ್‍ಟಿ ಬದಲಿಸಿ, ಸರಳ, ಪಾರದರ್ಶಕ ಹಾಗೂ ತಂತ್ರಜ್ಞಾನ ಆಧರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್, ಕಿರಣ್ ರಿಜಿಜು ಇದನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಜಿಎಸ್‍ಟಿ ಪದ್ಧತಿಯನ್ನು "ಒಟ್ಟಾರೆ ಭಯಾನಕ ತೆರಿಗೆ (ಗ್ರಾಸ್ಸಿ ಸ್ಕೇರಿ ಟ್ಯಾಕ್ಸ್) ಮತ್ತು ಗಬ್ಬರ್ ಸಿಂಗ್ ತೆರಿಗೆ ಎಂದು ಲೇವಡಿ ಮಾಡಿದ್ದಾರೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡಾ ಜಿಎಸ್‍ಟಿ ಜಾರಿಯಾದ 2017ನ್ನು ಭಯಾನಕ ವರ್ಷ ಎಂದು ಬಣ್ಣಿಸಿದ್ದಾರೆ.







