ಸಮ್ಮಿಶ್ರ ಸರ್ಕಾರ ಅಲುಗಾಡುತ್ತಿದೆ, ಯಾವಾಗ ಬೇಕಾದರೂ ಬೀಳಬಹುದು: ಮಾಜಿ ಸಚಿವ ಬಿ.ಎನ್ ಬಚ್ಚೇಗೌಡ

ಬಾಗೇಪಲ್ಲಿ,ಜು.01: ವೀರಪ್ಪಮೊಯ್ಲಿ ಅವರು ಈ ಭಾಗದಲ್ಲಿ 2 ಬಾರಿ ಸಂಸದರಾಗಿ ಆಯ್ಕೆಯಾದರೂ ಎತ್ತಿನ ಹೊಳೆ ಯೋಜನೆಯ ನೀರು ಬರಲಿಲ್ಲ ಎಂದು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊಯ್ಲಿ ಅವರು ಅನೇಕ ಕಡೆ ಸೋತು ಈ ಭಾಗದಲ್ಲಿ 2 ಬಾರಿ ಸಂಸದರಾಗಿದ್ದಾರೆ. ಮೊದಲ ಸಲ ಸಂಸದರಾಗಿ ಆಯ್ಕೆಯಾದಾಗ ಎತ್ತಿನ ಹೊಳೆ ನೀರನ್ನು ಈ ಭಾಗಕ್ಕೆ ಹರಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಅದು ಕಾರ್ಯಗತವಾಗಲಿಲ್ಲ. ನಂತರ ಲೋಕಸಭಾ ಚುನಾವಣೆಯಲ್ಲಿ ನನ್ನ ಪ್ರಾಣ ಹೋದರೂ ಎತ್ತಿನ ಹೊಳೆ ನೀರನ್ನು ಹರಿಸಿಯೇ ತೀರುತ್ತೇನೆ ಎಂದು ಸವಾಲು ಹಾಕಿದ್ದರು. ಆದರೆ ಇದುವರೆಗೂ ಈ ಭಾಗಕ್ಕೆ ನೀರು ಮಾತ್ರ ಬರಲಿಲ್ಲ. ಈಗ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈಗ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಅವರು, ಈಗ ಸಮಿಶ್ರ ಸರ್ಕಾರ ಅಲುಗಾಡುತ್ತಿದೆ. ಯಾವಾಗ ಬೇಕಾದರೂ ಸರ್ಕಾರ ಬೀಳಬಹುದು ಎಂದು ವ್ಯಂಗವಾಡಿದರು.
ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ 9 ಸಾವಿರ ಮತಗಳ ಅಂತರದಿಂದ ಸೋತಿದ್ದೇನೆ. ನಾನು ಸೋಲಲು ಪ್ರಮುಖವಾಗಿ ಹಾಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೇ ನೇರ ಕಾರಣ. ಮೊಯ್ಲಿ ಮತ್ತು ಕುಮಾರಸ್ವಾಮಿ ಅವರು ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ಸೋಲಿಸಿದರು. ಮುಂಬರುವ ಲೋಕಸಭಾ ಚುನಾವಣೆಗೆ ನಾನೂ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಆದರೆ ಪಕ್ಷದ ತೀರ್ಮಾನಕ್ಕೆ ಬದ್ದನಾಗಿದ್ದು ಪಕ್ಷಕ್ಕಾಗಿ ದುಡಿಯುತ್ತೇನೆ. ಇದರಲ್ಲಿ ಪಕ್ಷದ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ವರಪ್ರಸಾದರೆಡ್ಡಿ, ಬಿಜೆಪಿ ಮಂಡಲಾಧ್ಯಕ್ಷ ಎಸ್.ಟಿ.ಬಾಬು, ಪದಾಧಿಕಾರಿಗಳಾದ ಮಲ್ಲಿಖಾರ್ಜುನರೆಡ್ಡಿ, ಜಿ.ವಿ.ಕೃಷ್ಣಯ್ಯ, ಮಂಜುನಾಥ, ನರೇಂದ್ರರೆಡ್ಡಿ, ಅಶ್ವತ್ತಪ್ಪ, ನಿರ್ಮಲಮ್ಮ, ನಾರಾಯಣನಾಯ್ಕ, ನಾಗಪ್ಪ, ಮಾದ್ಯಮ ವಕ್ತಾರ ಸಿ.ಎನ್.ದೀರಜ್ ಮತ್ತಿತರರು ಹಾಜರಿದ್ದರು.







