ವಿಶ್ವಕಪ್‌ನ ಸಂಪೂರ್ಣ ಸಂಭಾವನೆ ದಾನ ಮಾಡಲು ಫ್ರಾನ್ಸ್ ಸ್ಟಾರ್ ಆಟಗಾರ ಬಾಪೆ ನಿರ್ಧಾರ!

ಕಝಾನ್, ಜು.1: ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನ ವಿರುದ್ಧ ಅವಳಿ ಗೋಲು ಗಳಿಸಿ ಫ್ರಾನ್ಸ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಡಲು ನೆರವಾಗಿದ್ದ ಯುವ ಫುಟ್ಬಾಲ್ ಆಟಗಾರ ಕೈಲ್ಯಾನ್ ಬಾಪೆ ಮೈದಾನದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದಲ್ಲದೆ ಮೈದಾನದ ಹೊರಗೂ ಎಲ್ಲ ಹೃದಯ ಗೆದ್ದಿದ್ದಾರೆ.
19ರ ಹರೆಯದ ಬಾಪೆ ಇಡೀ ವಿಶ್ವಕಪ್‌ನಲ್ಲಿ ತನಗೆ ಲಭಿಸುವ ಎಲ್ಲ ಸಂಭಾವನೆಯನ್ನು ವಿಕಲಚೇತನ ಮಕ್ಕಳಿಗೆ ನೀಡಲು ನಿರ್ಧರಿಸಿದ್ದಾರೆ. ಈ ಮೂಲಕ ಈಗ ರಶ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಮಾನವೀಯತೆಯ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.
ವಿಕಲಚೇತನ ಮಕ್ಕಳಿಗೆ ನೆರವಾಗುವ ಕ್ಷೇಮಾಭಿವೃದ್ದಿ ಸಂಸ್ಥೆಯೊಂದಕ್ಕೆ ತನ್ನ ಎಲ್ಲ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಸಿಗುವ ಶುಲ್ಕಗಳನ್ನು ದಾನವಾಗಿ ನೀಡಲು ಬಾಪೆ ನಿರ್ಧರಿಸಿದ್ದಾರೆ. ಕ್ಷೇಮಾಭಿವೃದ್ದಿ ಸಂಸ್ಥೆಯು ವಿಕಲಚೇತನ ಮಕ್ಕಳಿಗೆ ಕ್ರೀಡಾ ಚಟುವಟಕೆಗಳನ್ನು ಆಯೋಜಿಸುತ್ತಿದೆ ಎಂದು ‘ದಿ ಮಿರರ್’ ವರದಿ ಮಾಡಿದೆ.
ಓರ್ವ ಆಟಗಾರ ತನ್ನ ದೇಶವನ್ನು ಪ್ರತಿನಿಧಿಸಲು ಹಣ ನೀಡಬಾರದೆಂಬ ನಂಬಿಕೆ ಇಟ್ಟಿರುವ ಯುವ ಆಟಗಾರ ಬಾಪೆ ಪ್ರತಿ ಪಂದ್ಯದಲ್ಲಿ ಸಿಗುವ ಬೋನಸ್ ಹೊರತುಪಡಿಸಿ 17,000 ಪೌಂಡ್(ಸುಮಾರು 15.36 ಲಕ್ಷ ರೂ.)ದಾನ ನೀಡಲಿದ್ದಾರೆ. ಒಂದು ವೇಳೆ ಫ್ರಾನ್ಸ್ ತಂಡ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದರೆ ಫ್ರಾನ್ಸ್ ಫಾರ್ವರ್ಡ್ ಆಟಗಾರ ಬಾಪೆ 265,000 ಪೌಂಡ್ ಬೋನಸ್(ಅಂದಾಜು 2.39 ಕೋ.ರೂ.) ಪಡೆಯಲಿದ್ದಾರೆ. ಬಾಪೆ ಅವರ ಹೃದಯವೈಶ್ಯಾಲತೆಯು ಸಹ ಆಟಗಾರರ ಮೇಲೆ ಪರಿಣಾಮಬೀರಿದೆ.
ಈ ಕುರಿತು ಮಾತನಾಡಿದ ಫ್ರಾನ್ಸ್ ಡಿಫೆಂಡರ್ ಸ್ಯಾಮುಯೆಲ್ ಉಮ್‌ಟಿಟಿ , ‘‘ನಾನು ಹಣದ ಬಗ್ಗೆ ಚಿಂತಿಸಲಾರೆ. ವಿಶ್ವಕಪ್ ಆಡುವುದೇ ಒಂದು ಕನಸಿನ ಮಾತು. ಆ ಕನಸು ಈಡೇರಿದಕ್ಕೆ ಖುಷಿಯಾಗುತ್ತಿದೆ. ಹಣ ಅತ್ಯಂತ ಮುಖ್ಯ. ಆದರೆ, ನಾನು ಹಣದ ಹಿಂದೆ ಹೋಗಲಾರೆ. ಹಣಕ್ಕಾಗಿ ಆಡುವುದಿಲ್ಲ’’ ಎಂದು ಹೇಳಿದರು.







