ಹಬ್ಬಗಳು ಮನಸ್ಸುಗಳನ್ನು ಒಗ್ಗೂಡಿಸುತ್ತವೆ: ಸಚಿವ ವೆಂಕಟರಾವ್ ನಾಡಗೌಡ

ಬೆಂಗಳೂರು, ಜು.1: ಜನರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವಿಸುತ್ತಿರುವುದರಿಂದ ಮತ್ತೊಬ್ಬರನ್ನು ಭೇಟಿಯಾಗಲು ಸಮಯ ಸಿಗುತ್ತಿಲ್ಲ. ಆದರೆ, ನಮ್ಮ ನಾಡಿನ ಹಬ್ಬಗಳು ದೂರದ ಊರಿನಲ್ಲಿ ಇರುವವರನ್ನು ಹತ್ತಿರ ಸೇರಿಸುತ್ತವೆ. ಹಾಗೂ ಒಡೆದು ಹೋದ ಮನಸ್ಸುಗಳನ್ನು ಒಂದುಗೂಡಿಸುತ್ತಿವೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಪತ್ರಕರ್ತರ ವೇದಿಕೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕಾ ದಿನಾಚರಣೆ, ಅಮ್ಮಂದಿರ ದಿನಾಚರಣೆ, ಮಕ್ಕಳ ದಿನಾಚರಣೆ, ವೈದ್ಯರ ದಿನಾಚರಣೆ ಸೇರಿ ಇನ್ನಿತರ ದಿನಾಚರಣೆಗಳು ನಡೆಯುತ್ತಿರುವುದರಿಂದ ಅವರವರ ಕ್ಷೇತ್ರದವರು ಒಂದೇ ಕಡೆ ಸೇರಿ ಸಂಭ್ರಮಾಚರಣೆ ಮಾಡುತ್ತಾರೆ. ಇದರಿಂದಲೂ ಒಡೆದು ಹೋದ ಮನಸ್ಸುಗಳು ಒಂದುಗೂಡುತ್ತವೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕಾ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ ಈ ಎರಡು ಮಾಧ್ಯಮಗಳು ಕಾರ್ಯಾಂಗ ಹಾಗೂ ಶಾಸಕಾಂಗಕ್ಕಿಂತಲೂ ತುಂಬಾ ಪ್ರಬಲವಾಗಿದ್ದು, ಕ್ಷಣ ಮಾತ್ರದಲ್ಲಿ ಪ್ರಸ್ತುತ ಘಟನೆ ಹಾಗೂ ವಿಚಾರವನ್ನು ನಾಡಿನ ಜನತೆಗೆ ತಿಳಿಸುತ್ತವೆ ಎಂದು ಹೇಳಿದರು.
ಮೊಬೈಲ್‌ನಿಂದ ಲಾಭವೂ ಇದೆ, ನಷ್ಟವೂ ಇದೆ. ನಾನು 20 ವರ್ಷಗಳ ಹಿಂದೆ ಇಸ್ರೇಲ್‌ಗೆ ಹೋದಾಗ ಅಲ್ಲಿನ ಜನರ ಕೈಯಲ್ಲಿ ಮೊಬೈಲ್‌ನ್ನು ಕಂಡು ಆಶ್ಚರ್ಯಚಕಿತನಾಗಿದ್ದೆ. ಆದರೆ, ಇಂದು ನಮ್ಮ ದೇಶದಲ್ಲೂ ಕೋಟ್ಯಂತರ ಜನರು ಮೊಬೈಲ್‌ನ್ನು ಬಳಸುತ್ತಿದ್ದು, ಇದರಿಂದ, ಲಾಭವೂ ಆಗಿದೆ, ನಷ್ಟವೂ ಇದೆ ಎಂದು ತಿಳಿಸಿದರು.
ಎಲೆಕ್ಟ್ರಾನಿಕ್ ಮಾಧ್ಯಮದವರು ಯಾರಾದರೂ ತಪ್ಪು ಮಾಡಿದಾಗ ಬಲವಾಗಿ ಟೀಕಿಸುತ್ತಾರೆ. ಉತ್ತಮ ಕೆಲಸ ಮಾಡಿದಾಗ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹೀಗಾಗಿ, ಮಾಧ್ಯಮವನ್ನು ಸಂವಿಧಾನದ ನಾಲ್ಕನೆ ಅಂಗ ಎಂದು ಕರೆಯುತ್ತಾರೆ ಎಂದು ತಿಳಿಸಿದರು. ಇದೇ ವೇಳೆಯಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.







