ಮಕ್ಕಳ ಶಿಕ್ಷಣ ಸೇವೆಗೆ ಜೀವನ ಮುಡಿಪು: ನಿವೃತ್ತ ಶಿಕ್ಷಕಿ ಕಲ್ಲಮ್ಮ

ಬೆಂಗಳೂರು, ಜು. 1: ನಾನು ಸಂಬಳದಿಂದ ಮಾತ್ರ ನಿವೃತ್ತಿ ಹೊಂದುತ್ತಿದ್ದೇನೆ. ಆದರೆ, ನನ್ನ ಕೊನೆಯ ಉಸಿರು ಇರುವವರೆಗೂ ನನ್ನ ಜನಸೇವೆಯನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಪೀಣ್ಯ ದಾಸರಹಳ್ಳಿಯ ಸಮೀಪದ ಅಬ್ಬಿಗೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕಲ್ಲಮ್ಮ ಹೇಳಿದ್ದಾರೆ.
ರವಿವಾರ ಅಬ್ಬಿಗೆರೆ ಸರಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಯಾವುದೇ ಆಸ್ತಿ ಸಂಪಾದನೆ ಮಾಡಿಲ್ಲ. ನನ್ನ ವಿದ್ಯಾರ್ಥಿಗಳೇ ನನ್ನ ಆಸ್ತಿ-ಸಂಪತ್ತು ಎಲ್ಲ ಎಂದು ಬಣ್ಣಿಸಿದರು.
ಇದೇ ವೇಳೆ ಮಾತನಾಡಿದ ನಿವೃತ್ತ ಶಿಕ್ಷಕ ಗಂಗಯ್ಯ, ಬಡ ಮಕ್ಕಳಿಗೆ ಅನ್ನ-ಬಟ್ಟೆ ಕೊಟ್ಟು ಶಿಕ್ಷಣ ಕೊಟ್ಟ ಮಹಾತಾಯಿ ಕಲ್ಲಮ್ಮ. ಮಾತ್ರವಲ್ಲ, ಸರಕಾರಿ ಶಾಲೆಯ ಜಾಗವನ್ನು ಉಳಿಸಲು ಅವರೇ ಮೂಲ ಕಾರಣ. ದಾನಿಗಳಿಂದ ನೆರವಿನಿಂದ ಶಾಲಾ ಕಟ್ಟಡ, ಕಾಂಪೌಂಡ್, ಆಟದ ಮೈದಾನವೂ ನಿರ್ಮಾಣವಾಗಿದೆ ಎಂದು ಸ್ಮರಿಸಿದರು.
ಈ ವೇಳೆ ಅಬ್ಬಿಗೆರೆ ಸರಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ವಿನೋದ್, ಮುನಿರಾಜು, ಗಂಗಯ್ಯ, ಶಶಿಕಲಾ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.







