ಉದ್ಯಮಿ ಶೂಟೌಟ್ ಪ್ರಕರಣ: ಸುಫಾರಿ ಹಂತಕರಿಬ್ಬರ ಬಂಧನ

ಬೆಂಗಳೂರು, ಜು.1: ಉದ್ಯಮಿ ಕನ್ನಯ್ಯ ಲಾಲ್ ಎಂಬುವರ ಮೇಲೆ ಶೂಟೌಟ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಠಾಣೆ ಪೋಲೀಸರು ಇಬ್ಬರು ಸುಫಾರಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಹಾರ ಮೂಲದ ವಿಭೂತಿ ಕುಮಾರ್ ಸಿಂಗ್(58) ಮತ್ತು ಸುರಾಜ್ ಬಾನುಸಿಂಗ್(26) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.
ಪ್ರಕರಣದ ವಿವರ: ನಗರದ ಕೋರಮಂಗಲದಿಂದಲೇ ಕನ್ನಯ್ಯ ಲಾಲ್ ಅವರು, ಬಿಹಾರದಲ್ಲಿ ಮುಸುಕಿನ ಜೋಳದ ವ್ಯವಹಾರ ಹಾಗೂ ಪಾಪ್‌ಕಾನ್ ವ್ಯಾಪಾರ ಮಾಡುತ್ತಿದ್ದರು. 3 ತಿಂಗಳ ಹಿಂದೆ ಬಿಹಾರದ ಉದ್ಯಮಿ ರಾಜೇಂದ್ರ ಅಗರವಾಲ್ ವ್ಯವಹಾರ ಸಂಬಂಧ ಮಾತುಕತೆ ನಡೆಸಿದ್ದರು. ಅತ್ಯಂತ ಲಾಭದಾಯಕವಾಗಿದ್ದ ಪಾಪ್‌ಕಾರ್ನ್ ವ್ಯವಹಾರವನ್ನು ತನಗೆ ಬಿಟ್ಟುಕೊಡುವಂತೆ ಕನ್ನಯ್ಯ ಅವರನ್ನು ರಾಜೇಂದ್ರ ಅಗರವಾಲ್ ಕೇಳಿದ್ದರು. ಆದರೆ, ಕನ್ನಯ್ಯ ಲಾಲ್ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಸಿಟ್ಟುಗೆದ್ದಿದ್ದ ರಾಜೇಂದ್ರ ಅಗರ್‌ವಾಲ್ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿದ್ದರು ಎನ್ನಲಾಗಿದೆ.
ಬಿಹಾರದ ಸುಫಾರಿ ಹಂತಕ ವಿಭೂತಿಸಿಂಗ್‌ಗೆ 30 ಲಕ್ಷ ರೂ. ನೀಡಿ ಕನ್ನಯ್ಯ ಲಾಲ್ ಹತ್ಯೆ ಮಾಡಲು ಸುಫಾರಿ ನೀಡಲಾಗಿತ್ತು. ಅದರಂತೆ ಮೂವರು ಸೇರಿ ಜೂ.2ರಂದು ಕೋರಮಂಗಲದ ಆರ್ಕೇಡ್‌ನಲ್ಲಿನ ಜನರನ್ನು ನೋಡಿ ಬರೀ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎನ್ನುವ ಮಾಹಿತಿ ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಕನ್ನಯ್ಯ ಲಾಲ್ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಸಂಬಂಧ ಕೋರಮಂಗಲ ಠಾಣೆ ಪೋಲಿಸರು ತನಿಖೆ ಕೈಗೊಂಡು, ಆರ್ಕೇಡ್ ಸುತ್ತಮುತ್ತಲಿನ ಸಿಸಿಟಿವಿಗಳ ದೃಶ್ಯಾವಳಿ ಆಧರಿಸಿ ಇಬ್ಬರು ಸುಫಾರಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.







