ಜಗತ್ತಿಗೆ ಕ್ಷತ್ರಿಯರ ಕೊಡುಗೆ ತಿಳಿಸಬೇಕಿದೆ: ಯದುವೀರ್ ಒಡೆಯರ್

ಬೆಂಗಳೂರು, ಜು. 1: ರಾಜ್ಯ ಹಾಗೂ ದೇಶಕ್ಕಾಗಿ ಕ್ಷತ್ರಿಯರು ನೀಡಿರುವ ಕೊಡುಗೆಯನ್ನು ಜಗತ್ತಿಗೆ ತಿಳಿಸುವ ಕೆಲಸವಾಗಬೇಕಿದೆ ಎಂದು ಮೈಸೂರು ಮಹಾ ಸಂಸ್ಥಾನ ರಾಜ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರು ಹೇಳಿದ್ದಾರೆ.
ರವಿವಾರ ನಗರದ ಗಾಂಧಿಭವನದಲ್ಲಿ ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಬೆಂಗಳೂರು ಹಾಗೂ ಬೆಳಗಾವಿಯ ರಾಮ ವಧು ವರ ಅನ್ವೆಷಣಾ ಮಾಹಿತಿ ಕೇಂದ್ರದಿಂದ ನಡೆದ ಕ್ಷತ್ರಿಯ ವಿಕಾಸ ಪತ್ರಿಕೆ ಬಿಡುಗಡೆ ಹಾಗೂ ಮಹಾಸಭಾ ಲಾಂಛನ ಬಿಡುಗಡೆ ಗೊಳಿಸಿ, ಅವರು ಮಾತಾನಾಡಿದರು. ದೇಶಕ್ಕೆ ಕ್ಷತ್ರಿಯರು ಸಲ್ಲಿಸಿದ್ದ ಕೊಡುಗೆ ಬಹುತೇಕ ಜನರಿಗೆ ತಿಳಿದಿಲ್ಲ. ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳು ನಡೆಯಬೇಕಿದೆ. ಗತಕಾಲದಲ್ಲಿ ಮುಚ್ಚಿ ಹೋಗಿರುವ ಕ್ಷತ್ರಿಯರ ಸಾಧನೆಗಳ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಹೆಚ್ಚೆಚ್ಚು ಮಾಹಿತಿಯನ್ನು ಜಗತ್ತಿಗೆ ತಿಳಿಸಬೇಕಿದೆ ಎಂದರು.
ಕ್ಷತ್ರಿಯ ಸಮುದಾಯ ಬೆಳವಣಿಗೆಯಲ್ಲಿ ಸಮುದಾಯದ ಯುವಕರ ಪಾತ್ರ ಮುಖ್ಯ. 2020ರ ವೇಳೆಗೆ ಶೇ. 60 ರಷ್ಟು ಮಂದಿ ಯುವಕರೇ ಹೆಚ್ಚು ಉದ್ಯೋಗದಲ್ಲಿರುತ್ತಾರೆ. ಹೀಗಾಗಿ, ಯುವ ಪೀಳಿಗೆಗೆ ಸಮುದಾಯದವರ ಸಾಧನೆ ಪ್ರಚುರಪಡಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರವಾಗಬೇಕು. ಪತ್ರಿಕೆ ಮೂಲಕ ದೇಶಾದ್ಯಂತ ಪ್ರಸಾರ ಮಾಡಿ ಸಮುದಾಯದ ಏಳಿಗೆಗೆ ಸಹಕಾರಿಯಾಗುವಂತೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಮೊಮ್ಮಗ ವರ್ಚಸ್ವಿ ಶ್ರೀಕಂಠ ಸಿದ್ದಲಿಂಗ ರಾಜ ಅರಸು ಮಾತನಾಡಿ, ವೀರತನ ನಾಯಕತ್ವ ಸರಳ ಜೀವನ ನಿಸ್ವಾರ್ಥ ಸಮಾಜದ ಬೆಳವಣಿಗೆಗೆ ಶ್ರಮಿಸಿದವನೇ ನಿಜವಾದ ಕ್ಷತ್ರಿಯ. ಆದರೆ, ಅಹಂ ಸೇರಿದರೆ ನಿಜವಾದ ಕ್ಷತ್ರಿಯನಾಗಲಾರ ಎಂದ ಅವರು, ಗಾಂಧಿ ಬುದ್ಧ, ಜನಿಸಿದ್ದ ನಾಡಿನಲ್ಲಿ ಮಹಿಳೆಯರಿಗೆ ರಕ್ಷಣೆ ಸಿಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದರು.
ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಸಂಸ್ಥಾಪಕ ಶ್ರೀಧರ ರಾಜ ಅರಸು ಮಾತನಾಡಿ, ಕ್ಷತ್ರಿಯ ಜನಾಂಗದ ವಿಕಾಸ ಆಗದಿದ್ದre ನಮ್ಮ ಜನಾಂಗ ಕಣ್ಮರೆಯಾಗಲಿದೆ. ಮರಾಠಿ, ತೆಲುಗು, ತಮಿಳು ಸೇರಿದಂತೆ ಒಟ್ಟು 1 ಕೋಟಿ 18 ಲಕ್ಷ ಜನ ಕ್ಷತ್ರಿಯರಿದ್ದಾರೆ. ಇದನ್ನು ಪರಿಗಣಿಸಿ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜರಾಜೇಶ್ವರ ಸಂಸ್ಥಾನ ಮಠದ ವಿಶ್ವಾಧಿರಾಜ ತೀರ್ಥ ಸ್ವಾಮಿಜೀ, ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸು, ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯ್ ಸಿಂಗ್ ಸೇರಿ ಪ್ರಮುಖರಿದ್ದರು.







