ಬೆಂಗಳೂರು: ಸಾಧಕರಿಗೆ ಮಾಸ್ತಿ ಪ್ರಶಸ್ತಿ ಪ್ರದಾನ

ಬೆಂಗಳೂರು, ಜು.1: ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ಪ್ರಸಕ್ತ ಸಾಲಿನ ನಾಡೋಜ ಮಾಸ್ತಿ ಪುರಸ್ಕಾರ ಹಾಗೂ ಮಾಸ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ರವಿವಾರ ನಗರದ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಪ್ರದಾನ ಮಾಡಿದರು. ಪ್ರಶಸ್ತಿ ಪ್ರದಾನದ ಬಳಿಕ ಮಾತನಾಡಿದ ಡಾ.ಚಂದ್ರಶೇಖರ ಕಂಬಾರ, ಮಾಸ್ತಿಯವರು ಕನ್ನಡ ಸಾಹಿತ್ಯದ ಆಸ್ತಿ. ಅವರ ಸಾಹಿತ್ಯದಲ್ಲಿ ದಾಖಲಾಗುತ್ತಿದ್ದ ಅಕ್ಷರಗಳು ಅಂತಕರಣದಿಂದ ಬಂದಿವೆ. ಅವರ ವಿಚಾರಧಾರೆಗಳು ನಮ್ಮ ಜೀವನದಲ್ಲಿ ವಿವೇಚನೆಯಿಂದ ಬದುಕುವುದನ್ನು ಕಲಿಸಿಕೊಡುತ್ತವೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್, ಜ್ಞಾನಪೀಠ ಪ್ರಶಸ್ತಿ ವಿಜೇತ ಮಾಸ್ತಿ, ಸಣ್ಣ ಕಥೆಗಳ ಜನಕ ಎಂದೇ ಪ್ರಖ್ಯಾತರಾಗಿದ್ದರು. ಜೊತೆಗೆ, ನಿರ್ಲಕ್ಷಿತ ಸಮುದಾಯ, ಸಾಮಾನ್ಯ ವ್ಯಕ್ತಿಗಳ ಜೀವನದ ಬಗ್ಗೆ ಬರೆದ ಮಾಸ್ತಿಯವರ ಬರವಣಿಗೆ ಸಾಮಾನ್ಯ ಜನರ ಮನ ತಟ್ಟಿತ್ತು ಎಂದು ಹೇಳಿದರು.
ಚಿಂತಕ ಡಾ.ಸಿ.ಎನ್.ರಾಮಚಂದ್ರನ್ ಮಾತನಾಡಿ, ಮಾಸ್ತಿ, ಕುವೆಂಪು ಅವರಂತ ದಿಗ್ಗಜರು ಬರೆದಂತಹ ಪುಸ್ತಕಗಳನ್ನು ಓದಿದಾಗ ಮಾತ್ರ ನೆನಪಾಗುತ್ತದೆ. ಆದರೆ, ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದರ ಮೂಲಕ ಸದಾಕಾಲ ನೆನಪಾಗುತ್ತದೆ. ಜೊತೆಗೆ, ಪ್ರಶಸ್ತಿಗಳನ್ನು ಕೊಟ್ಟಾಗ ಸಾಧನೆಗೈದವರಿಗೆ ತಮ್ಮ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡಲು ಪ್ರೇರಣೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ವಿಮರ್ಶಕರಾದ ಡಾ.ಎಂ.ಎಸ್.ಆಶಾದೇವಿ, ವಿಜಯಶಂಕರ್,ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಸೇರಿ ಪ್ರಮುಖರಿದ್ದರು.
ಮಾಸ್ತಿ ಪ್ರಶಸ್ತಿ: ಡಾ.ಕೆ.ವಿ.ತಿರುಮಲೇಶ್, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ.ಬಿ.ಎಲ್.ವೇಣು, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೊ.ಎಂ.ಆರ್.ಕಮಲಾ ಮಾಸ್ತಿ ಕಥಾ ಪುರಸ್ಕಾರ: ಎಸ್.ಎನ್. ಸೇತುರಾಮ್,
ಮಾಸ್ತಿ ಕಾದಂಬರಿ ಪುರಸ್ಕಾರ: ತೇಜಸ್ವಿನಿ ಹೆಗಡೆ, ಚೀಮನಹಳ್ಳಿ ರಮೇಶ್ ಬಾಬು







