ಟಿ.ಆರ್.ಪಿ ಗಾಗಿ ಅಸ್ಪಷ್ಟ ಸುದ್ಧಿಯನ್ನು ನೀಡುವುದು ಸರಿಯಲ್ಲ: ಸಚಿವ ಎಸ್.ಆರ್ ಶ್ರೀನಿವಾಸ್

ತುಮಕೂರು,ಜು.01: ಟಿಆರ್‍ಪಿ ಗೋಸ್ಕರ ಸ್ಪಷ್ಟವಾಗಿ ವಿಷಯ ತಿಳಿಯದೇ ಇಲ್ಲ-ಸಲ್ಲದ ಮಾಹಿತಿಯನ್ನು ನೀಡುವುದನ್ನು ಬಿಟ್ಟು, ನೈಜ ವರದಿಗಾರಿಕೆ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕೆಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ದತ್ತಿ ಪ್ರಶಸ್ತಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದಿನದ 24 ಗಂಟೆ ಒಂದೇ ಘಟನೆಯನ್ನು ತಿರುಚಿ ತಿರುಚಿ ಹೇಳುವುದಕ್ಕಿಂತ, ಅದಕ್ಕೆ ಹೊರತಾಗಿ ಸತ್ಯ ಏನು ಎಂಬುದನ್ನು ತಿಳಿದು, ಒಂದು ಕ್ಷಣದ ಸುದ್ಧಿ ಬಿತ್ತರಿಸಿದರೂ ಜನರಿಗೆ ಹೆಚ್ಚಿನ ಉಪಕಾರವಾಗುತ್ತದೆ ಎಂದರು.
ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹಳಿ ತಪ್ಪಿದಾಗ ಅದನ್ನು ಸರಿಪಡಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವುದೇ ಮಾಧ್ಯಮಗಳ ಜವಾಬ್ದಾರಿ ಆಗಬೇಕು ಎಂದ ಅವರು, ಜನರಿಗೆ ಏನನ್ನು, ಹೇಗೆ ಯಾವ ಸುದ್ದಿಯನ್ನು ಬಿತ್ತರಿಸಬೇಕು ಅಥವಾ ನೀಡಬೇಕು ಹಾಗೂ ಯಾವುದನ್ನು ನೀಡಬಾರದು ಎಂದು ತಿಳಿದುಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಇಂದಿನ ಪತ್ರಿಕೋದ್ಯಮದ ಮೇಲಿದೆ ಎಂದು ನುಡಿದರು.
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಸತ್ಯವನ್ನು ಮುಚ್ಚಿಡದೇ ಸಾರ್ವಜನಿಕರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ವ್ಯಕ್ತಿಗತ ವರದಿಗಾರಿಕೆಗಿಂತ ವಿಷಯಾಧಾರಿತ ವರದಿಗಳನ್ನು ಮಾಡುವ ಮೂಲಕ ಪತ್ರಕರ್ತರು ನೈತಿಕತೆಯನ್ನು ಎತ್ತಿ ಹಿಡಿಯಬೇಕು. ಇಂದಿನ ಪತ್ರಿಕೋದ್ಯಮದಲ್ಲಿ ಯಾವುದೇ ಒಂದು ಸುದ್ದಿ ಪ್ರಕಟಗೊಂಡರೆ ಅಥವಾ ಬಿತ್ತಿರಿಸಿದರೆ ಅದು ತಪ್ಪೋ ಸರಿಯೋ ಎಂಬದನ್ನು ಒಂದಕ್ಕೆ ಹತ್ತು ಬಾರಿ ಖಚಿತ ಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದನ್ನು ಪತ್ರಕರ್ತರು ಮನದಟ್ಟು ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹಾಗೂ ಸಮಾಜದಲ್ಲಿ ಸರಿತಪ್ಪುಗಳನ್ನು ನಿರ್ಭೀತಿಯಿಂದ ಜನರಿಗೆ ತಿಳಿಸುವ ಮೂಲಕ ದಿಕ್ಕು ತಪ್ಪಿದವರನ್ನು ಸರಿದಾರಿಗೆ ತರುವ ಕೆಲಸಗಳು ಮಾಧ್ಯಮಗಳಿಂದಾಗಬೇಕು ಎಂದು ತಿಳಿಸಿದರು.
ಭಾರತೀಯ ಕಾರ್ಯನಿರತ ಕರ್ತಕರ್ತರ ಸಂಘದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಸಮಾಜಪರ ಕೆಲಸ ಮಾಡುವ ಪತ್ರಕರ್ತತರಿಗೆ ಸಮಾಜದಲ್ಲಿ ಅಡೆ-ತಡೆ ಸಾಮಾನ್ಯ. ಅಲ್ಲದೆ ವರದಿಗಾರರ ಮೇಲೆ ಹಲ್ಲೆ, ಬೆದರಿಕೆಗಳೂ ನಡೆಯುತ್ತಿದ್ದು, ಇವುಗಳಿಗೆ ಎದೆಗುಂದದೆ ಸತ್ಯವನ್ನು ಬಿತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಮಾತನಾಡಿ, ಇಂದು ಪತ್ರಿಕೋದ್ಯಮ ಅವನತಿಯತ್ತ ಸಾಗುತ್ತಿದೆ ಕಳೆದುಕೊಳ್ಳುತ್ತಿದೆ. ಸಮಾಜವನ್ನು ತಿದ್ದುವ ಪತ್ರಕರ್ತರು ಇಂದು ಯಾವುದು ಸರಿ, ಯಾವುದು ತಪ್ಪು ಎಂಬುದು ಅರಿತುಕೊಂಡು ನೈಜತೆಯನ್ನು ಎತ್ತಿಹಿಡಿಯಬೇಕಾಗಿದೆ ಎಂದು ತಿಳಿಸಿದರು.
ಇದೇ ವೇಳೆ ದತ್ತಿ ಮತ್ತು ವಾರ್ಷಿಕ ಪ್ರಶಸ್ತಿ ಪಡೆದ ಪತ್ರಕರ್ತರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರಾಮಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್, ಕಾರ್ಯಕಾರಿಣಿ ಸದಸ್ಯ ಜಿ.ಇಂದ್ರಕುಮಾರ್ ಇದ್ದರು.







