ಬಿ.ಸಿ.ರಾವ್ ಶಿವಪುರಗೆ ಪತ್ರಿಕಾ ದಿನದ ಗೌರವ

ಹೆಬ್ರಿ, ಜು.1: ಹಿರಿಯ ಸಾಹಿತಿ, ಲೇಖಕ, ಪತ್ರಕರ್ತ ಹಾಗೂ ಹರಿದಾಸ ರಾದ ಬಿ.ಸಿ.ರಾವ್ ಶಿವಪುರ ಇವರಿಗೆ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕದ ವತಿಯಿಂದ ‘ಹಿರಿಯರೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ ಪತ್ರಿಕಾ ದಿನದ ಗೌರವ ಸಮರ್ಪಿಸಿ ಸನ್ಮಾನಿಸಲಾಯಿತು.
ಶಿವಪುರದ ಗುರುಪದದ ಅವರ ನಿವಾಸದಲ್ಲಿ ಈ ಕಾರ್ಯಕ್ರಮ ನಡೆಯಿತು. ಬಿ.ಸಿ.ರಾವ್ ಅವರನ್ನು ಗೌರವಿಸಿ ಮಾತನಾಡಿದ ಕಾರ್ಕಳದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ಮಾನವೀಯ ಮೌಲ್ಯಗಳ ಪ್ರತಿಪಾದಕರಾದ ಬಿ.ಸಿ.ರಾವ್ ಶಿಕ್ಷಣ, ಸಾಹಿತ್ಯ, ದಾಸಸಾಹಿತ್ಯ, ಮಾಧ್ಯಮ ಮತ್ತು ಸಂಘಟನೆ ಕ್ಷೇತ್ರದಲ್ಲೂ ಅಪಾರ ಸೇವೆ ಮಾಡಿದ್ದಾರೆ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ಬಿ.ಸಿ.ರಾವ್ ಶಿವಪುರ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪತ್ರಕರ್ತರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಶೇಖರ ಅಜೆಕಾರು ಹಾಗೂ ಪತ್ರಕರ್ತ ಪುಂಡಲೀಕ ಮರಾಠೆ ಶಿರ್ವ ಅಭಿನಂದನಾ ಭಾಷಣ ಮಾಡಿದರು.
ಮುದ್ರಾಡಿ ಆಧಿಶಕ್ತಿ ನಂದಿಕೇಶ್ವರ ದೇವಸ್ಥಾನದ ಧರ್ಮದರ್ಶಿ ಧರ್ಮ ಯೋಗಿ ಮೋಹನ್ ಆರ್ಶೀವಚನ ನೀಡಿದರು. ಹೆಬ್ರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಎಚ್.ಭಾಸ್ಕರ ಜೋಯಿಸ್, ಶಿವಪುರಶಂಕರದೇವ ದೇವಸ್ಥಾನದ ಆಡಳಿತ ಮೊಕ್ತೇಸರ ಬಿಲ್ಲುಬೈಲು ಸುರೇಶ ಶೆಟ್ಟಿ, ಮಾಜಿ ಅಧ್ಯಕ್ಷ ಮೂರ್ಸಾಲು ಮೋಹನದಾಸ ನಾಯಕ್, ಸಮಾಜ ಸೇವಕ ಬೈಕಾಡಿ ಮಂಜುನಾಥ ರಾವ್, ಅಹಲ್ಯ ಬಿ.ಸಿ.ರಾವ್, ಮುಳ್ಳುಗುಡ್ಡೆ ಶಾಲೆಯ ಮುಖ್ಯ ಶಿಕ್ಷಕ ಸೀತಾರಾಮ ಶೆಟ್ಟಿಗಾರ್, ಹೆಬ್ರಿ ಪತ್ರಕರ್ತರ ಸಂಘದ ಸುಕುಮಾರ್ ಮುನಿಯಾಲ್, ಬಾಲಚಂದ್ರ ಮುದ್ರಾಡಿ, ಅನಂತ ನಾಯಕ್, ಗುರುದಾಸ ಬಡ್ಕಿಲ್ಲಾಯ, ವಸಂತ ಬಡ್ಕಿಲ್ಲಾಯ ಮತ್ತಿತರರು ಉಪಸ್ಥಿತರಿದ್ದರು.







