ಕತ್ತಲೆಯನ್ನು ಕತ್ತಲೆಯಿಂದಲೇ ಹೊಡೆದೋಡಿಸಲು ಅಸಾಧ್ಯ: ಹರ್ಷ ಮಂದರ್
ಸಂತ ಅಲೋಶಿಯಸ್ ಕಾಲೇಜಿನಲ್ಲಿ ಚರ್ಚಾ ಸರಣಿ ಕಾರ್ಯಕ್ರಮ

ಮಂಗಳೂರು, ಜು.1: ಕತ್ತಲೆಯನ್ನು ಕತ್ತಲೆಯಿಂದಲೇ ಹೊಡೆದೋಡಿಸಲು ಸಾಧ್ಯವಿಲ್ಲ. ಅದಕ್ಕೆ ಬೆಳಕು ಮುಖ್ಯವಾಗಿರುತ್ತದೆ. ಹಾಗೇ ಪ್ರಸ್ತುತ ಸಮಾಜದಲ್ಲಿ ಹರಡುತ್ತಿರುವ ದ್ವೇಷ, ಅಸಹಿಷ್ಣುತೆಯನ್ನು ಪ್ರೀತಿಯಿಂದ ಗೆಲ್ಲಬೇಕು. ಹಿಂಸೆಗೆ ಪ್ರತಿ ಹಿಂಸೆ ಯಾವತ್ತೂ ಒಳ್ಳೆಯದಲ್ಲ ಎಂದು ಹಿರಿಯ ಲೇಖಕ ಹರ್ಷ ಮಂದರ್ ಹೇಳಿದರು.
ನಗರದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ಶನಿವಾರ ನಡೆದ ‘ಮಂಥನ-ಸಂಭಾಷಣೆಯ ಮೂಲಕ ಸಾಮರಸ್ಯ’ ಎಂಬ ಚರ್ಚಾ ಸರಣಿಯ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತವನ್ನು ನಾವು ಅಸಮಾನತೆಯೊಂದಿಗೆ ನಿರ್ಮಿಸಿದ್ದೇವೆ. ಹಾಗಾಗಿ ಅಸಮಾನತೆಯ ಸವಾಲು ಹಾಗೂ ದ್ವೇಷದ ಸವಾಲುಗಳನ್ನು ನಾವು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಪಡೆದವರೇ ಭ್ರಷ್ಟಾಚಾರ, ದ್ವೇಷ, ಕೋಮುವಾದಗಳನ್ನು ಬಿತ್ತುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿದ್ದಾರೆ. ಇದರಿಂದ ದೇಶ ಎತ್ತ ಸಾಗಬಹುದು ಎಂಬ ಚಿಂತೆಯೂ ಇವರಿಗೆ ಇಲ್ಲ. ಹಾಗಾಗಿ ಯುವ ಜನಾಂಗ ಸಾಮರಸ್ಯ ಸಮಾಜ ಸೃಷ್ಟಿಸಲು ಮುಂದಾಗಬೇಕು ಎಂದು ಹರ್ಷ ಮಂದರ್ ಕರೆ ನೀಡಿದರು.
ಡಾ. ಜಾನ್ ದಯಾಳ್ ಮಾತನಾಡಿ ಯಾವ ಧರ್ಮವೂ ಕೂಡ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಆದರೂ ಭಾರತದಲ್ಲಿ ಹಿಂಸಾಚಾರ ನಡೆಯುತ್ತಿದೆ. ಏಕೆಂದರೆ ಜನರು ಸಣ್ಣ ವಿಷಯಗಳನ್ನು ತೀರ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ ಮತ್ತು ಅದು ಜಗಳ ಅಥವಾ ಹಿಂಸಾಚಾರಕ್ಕೆ ತಿರುಗುತ್ತದೆ ಎಂದರು.
ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಬ್ಲಾಕ್ ನಿರ್ದೇಶಕ ಡಾ. ಆಲ್ವಿನ್ ಡೇಸಾ, ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, ವಿದ್ಯಾರ್ಥಿನಿ ಜಿನಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ನಿರ್ದೇಶಕ ಡಾ. ರತನ್ ಮೊಹಂತ ಕಾರ್ಯಕ್ರಮ ನಿರೂಪಿಸಿದರು.







