ನಗದು ವಹಿವಾಟಿಗೆ ಮಿತಿ: ಈ ವಿಷಯಗಳು ನಿಮಗೆ ಗೊತ್ತಿರಲೇಬೇಕು

ನಗದು ಹಣದ ವಿನಿಮಯ ಮತ್ತು ವಹಿವಾಟುಗಳಿಗೆ ಕಡಿವಾಣ ಹಾಕಲು ಸರಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆಯಾದರೂ ಹೆಚ್ಚಿನ ಭಾರತೀಯರು ಇಂದಿಗೂ ಅದನ್ನೇ ಇಷ್ಟಪಡುತ್ತಾರೆ. ಕಳೆದ ವರ್ಷ ದೇಶದಲ್ಲಿ ಬ್ಯಾಂಕುಗಳಿಂದ ಹಣ ಹಿಂದೆಗೆತಗಳು ಶೇ.22ರಷ್ಟು ಏರಿಕೆಯಾಗಿವೆ ಎಂಬ ಇತ್ತೀಚಿನ ವರದಿಯೊಂದು ಜನಸಾಮಾನ್ಯರು ಮತ್ತು ವ್ಯವಹಾರಸ್ಥರು ಈಗಲೂ ನಗದು ಹಣವನ್ನೇ ಅತಿಯಾಗಿ ನೆಚ್ಚಿಕೊಂಡಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸಿದೆ.
ಭಾರತೀಯರು ಸಿಜಿಟಲ್ ಹಣಪಾವತಿ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಸರಕಾರವು ಯುಪಿಐ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅಲ್ಲದೆ 2,000 ರೂ.ಗಿಂತ ಕಡಿಮೆ ಪ್ರಮಾಣದ ವಹಿವಾಟಿನಲ್ಲಿ ಮರ್ಚಂಟ್ ಡಿಸ್ಕೌಂಟ್ ರೇಟ್(ಎಂಡಿಆರ್)ನ ಹೊರೆಯನ್ನೂ ತಾನೇ ಹೊತ್ತುಕೊಂಡಿದೆ.
ನಾವೆಲ್ಲ ನಗದು ವ್ಯವಹಾರಗಳನ್ನು ನಡೆಸುತ್ತೇವಾದರೂ ಹೆಚ್ಚಿನ ಪ್ರಮಾಣದಲಿ ನಗದು ಸ್ವೀಕರಿಸುವುದಕ್ಕೆ ಮೊದಲು ಈ ನಾಲ್ಕು ನಗದು ಮಿತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಮಿತಿಗಳ ಉಲ್ಲಂಘನೆಯು ಹಣವನ್ನು ಸ್ವೀಕರಿಸಿದವರನ್ನು ಗಂಭೀರ ಸಮಸ್ಯೆಗಳಲ್ಲಿ ಸಿಲುಕಿಸುತ್ತದೆ.
► ದೈನಿಕ ಮಿತಿ
ನೀವು ಒಂದು ದಿನದಲ್ಲಿ ಒಬ್ಬನೇ ವ್ಯಕ್ತಿಯಿಂದ ಅಥವಾ ಒಂದೇ ಕಾರ್ಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಪಾವತಿಗಳ ಮೂಲಕ ಎರಡು ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸಲು ನಗದು ವಹಿವಾಟು ಕಾಯ್ದೆಯಲ್ಲಿ ಅವಕಾಶವಿಲ್ಲ.
ಈ ಮೊದಲು ಈ ಮಿತಿ ಮೂರು ಲಕ್ಷ ರೂ.ಆಗಿತ್ತು ಮತ್ತು 2017,ಮಾರ್ಚ್‌ನಲ್ಲಿ ಅದನ್ನು ಎರಡು ಲ.ರೂ.ಗೆ ತಗ್ಗಿಸಲಾಗಿದೆ. 271 ಡಿಎ ಸೆಕ್ಷನ್‌ನಡಿ ನಗದು ಮಿತಿಯನ್ನು ಉಲ್ಲಂಘಿಸಿ ಹಣ ಸ್ವೀಕರಿಸಿದ ವ್ಯಕ್ತಿಗೆ ಆತ ಸ್ವೀಕರಿಸಿದ ಹಣಕ್ಕೆ ಸಮನಾದ ದಂಡವನ್ನು ವಿಧಿಸಲಾಗುತ್ತದೆ. ಆದರೆ ಬ್ಯಾಂಕು ಅಥವಾ ಅಂಚೆಕಚೇರಿಯಿಂದ ಹಣ ಹಿಂದೆಗೆತಕ್ಕೆ ಈ ಮಿತಿ ಅನ್ವಯಿಸುವುದಿಲ್ಲ.
► ಸ್ಥಿರಾಸ್ತಿ
ಮನೆ ಇತ್ಯಾದಿ ಸ್ಥಿರಾಸ್ತಿಗಳ ಮಾರಾಟ ಅಥವಾ ವರ್ಗಾವಣೆಯ ಮೂಲಕ 20,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದುರೂಪದಲ್ಲಿ ಸ್ವೀಕರಿಸಲೇಬೇಡಿ. ಹಾಗೆ ಮಾಡಿದರೆ ತೆರಿಗೆ ಇಲಾಖೆಯ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಇಲ್ಲಿಯೂ ಕೂಡ ಹಣ ಸ್ವೀಕರಿಸಿದ ವ್ಯಕ್ತಿಯೇ ದಂಡವನ್ನು ಪಾವತಿಸಬೇಕಾಗುತ್ತದೆಯೇ ಹೊರತು ಹಣವನ್ನು ನೀಡಿದ ವ್ಯಕ್ತಿಯಲ್ಲ.
► ದೇಣಿಗೆಗಳು
ನೋಂದಾಯಿತ ಟ್ರಸ್ಟ್ ಅಥವಾ ರಾಜಕೀಯ ಪಕ್ಷಕ್ಕೆ 2,000 ರೂ.ಗಿಂತ ಹೆಚ್ಚಿನ ಹಣವನ್ನು ದೇಣಿಗೆಯಾಗಿ ನೀಡುವುದು ಕೂಡ ತೆರಿಗೆ ಕಾಯ್ದೆಯ ಉಲ್ಲಂಘನೆಯಾಗುತ್ತದೆ. 2017-18ನೇ ಸಾಲಿನಿಂದ 2,000 ರೂ.ಗಿಂತ ಹೆಚ್ಚಿನ ನಗದು ದೇಣಿಗೆಗಳಿಗೆ ಸೆಕ್ಷನ್ 80ಜಿ ಅಡಿ ತೆರಿಗೆ ವಿನಾಯಿತಿ ದೊರೆಯುವುದಿಲ್ಲ.
► ವ್ಯವಹಾರಗಳು
ವ್ಯವಹಾರದಲ್ಲಿ ಅಥವಾ ವೃತ್ತಿಪರ ಖರ್ಚುಗಳಿಗೆ 10,000 ರೂ.ಗಿಂತ ಹೆಚ್ಚಿನ ನಗದು ಪಾವತಿಯು ದಂಡವನ್ನು ಆಕರ್ಷಿಸುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 43 10,000 ರೂ.ಗಿಂತ ಹೆಚ್ಚಿನ ಆಸ್ತಿಯ ಖರೀದಿಗೆ ನಗದು ರೂಪದಲ್ಲಿ ಹಣಪಾವತಿಯನ್ನು ಪ್ರತಿಬಂಧಿಸಿದೆ.







