ಮಕ್ಕಳ ಕಳ್ಳರೆಂಬ ಶಂಕೆಯಿಂದ ಐವರನ್ನು ಥಳಿಸಿ ಹತ್ಯೆ: 15 ಜನರ ಬಂಧನ

ಹೊಸದಿಲ್ಲಿ,ಜು.1: ದೇಶದಲ್ಲಿ ಅಮಾಯಕರನ್ನು ಥಳಿಸಿ ಕೊಲ್ಲುತ್ತಿರುವ ಪ್ರಕರಣಗಳ ಸಾಲಿಗೆ ಹೊಸದಾಗಿ ಇನ್ನೊಂದು ಘಟನೆ ರವಿವಾರ ಸೇರ್ಪಡೆಗೊಂಡಿದೆ. ಧುಲೆ ಜಿಲ್ಲೆಯ ಸಾಕ್ರಿ ತಾಲೂಕಿನ ಬುಡಕಟ್ಟು ಗ್ರಾಮ ರೈನಪಾಡಾದಲ್ಲಿ ಮಕ್ಕಳ ಅಪಹರಣಕಾರರೆಂಬ ಶಂಕೆಯಿಂದ ಗ್ರಾಮಸ್ಥರು ಐವರನ್ನು ಬರ್ಬರವಾಗಿ ಥಳಿಸಿ ಹತ್ಯೆಗೈದಿದ್ದಾರೆ. ಮೃತರಲ್ಲಿ ಓರ್ವನನ್ನು ಸೊಲ್ಲಾಪುರ ಜಿಲ್ಲೆಯ ನಿವಾಸಿ ದಾದಾರಾವ್ ಭೋಸಲೆ ಎಂದು ಗುರುತಿಸಲಾಗಿದ್ದು,ಇನ್ನುಳಿದವರನ್ನು ಇನ್ನಷ್ಟೇ ಗುರುತಿಸಬೇಕಿದೆ. ಈ ಬರ್ಬರ ಹತ್ಯೆಗಳನ್ನು ನಡೆಸಿದ ಗುಂಪಿನಲ್ಲಿದ್ದ 15 ಗ್ರಾಮಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.
ದೇಶದಲ್ಲಿ ಇತ್ತೀಚಿನ ಗುಂಪುಗಳಿಂದ ಥಳಿಸಿ ಹತ್ಯೆ ಪ್ರಕರಣಗಳಂತೆ ಇಲ್ಲಿಯೂ ವಾಟ್ಸಾಪ್ ವದಂತಿಗಳು ಪ್ರಮುಖ ಪಾತ್ರ ವಹಿಸಿವೆ. ಮಕ್ಕಳ ಅಪಹರಣಕಾರರ ಗುಂಪೊಂದು ಬಂದಿರುವ ಬಗ್ಗೆ ವದಂತಿಗಳು ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು,ಅವುಗಳನ್ನು ನಂಬಿದ ಜನರು ಮಕ್ಕಳ ಅಪಹರಣಕಾರರೆಂದು ಶಂಕಿಸಿ ಐವರನ್ನು ಹತ್ಯೆ ಮಾಡಿದ್ದಾರೆ. 15 ಜನರನ್ನು ಬಂಧಿಸಲಾಗಿದ್ದು,ತನಿಖೆಯು ಪ್ರಗತಿಯಲ್ಲಿದೆ ಎಂದು ಧುಲೆ ಎಸ್‌ಪಿ ಎಂ.ರಾಮಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಹತ್ಯೆಗೊಳಗಾದವರು ಆಗಷ್ಟೇ ಬಸ್ಸಿನಿಂದ ಇಳಿದಿದ್ದು,ವಾರದ ಸಂತೆಗಾಗಿ ಸೇರಿದ್ದ ಗ್ರಾಮಸ್ಥರು ಮಕ್ಕಳ ಅಪಹರಣಕಾರರೆಂದು ಶಂಕಿಸಿ ಅವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಡಿಜಿಪಿ ಕಚೇರಿಯ ಅಧಿಕಾರಿಯೋರ್ವರು ತಿಳಿಸಿದರು. ಮೃತದೇಹಗಳನ್ನು ಪಿಂಪಳನೇರ್ ಆಸ್ಪತ್ರೆಗೆ ಸಾಗಿಸಲಾಗಿದೆ.
ತನ್ಮಧ್ಯೆಇಂತಹುದೇ ಘಟನೆಯೊಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಮಗುವೊಂದನ್ನು ಅಪಹರಿಸಲು ಯತ್ನಿಸಿದ್ದರು ಎಂಬ ಶಂಕೆಯಿಂದ ಇಬ್ಬರನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.







