ಚಾಮರಾಜನಗರ: ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ; ನವ ಜೀವನಕ್ಕೆ ಕಾಲಿರಿಸಿದ 60 ಜೋಡಿಗಳು

ಚಾಮರಾಜನಗರ,ಜು.01: ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿದಿಯಲ್ಲಿಂದು 60 ಜೋಡಿಗಳು ನವಜೀವನಕ್ಕೆ ಕಾಲಿರಿಸಿದರು .
ಪ್ರತಿವರ್ಷದಂತೆ ಶ್ರೀ ಮಲೈಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅದ್ದೂರಿಯಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯದ ನಾನಾ ಕಡೆಗಳಿಂದ ಈ ಕಾರ್ಯಕ್ರದಲ್ಲಿ ಮದುವೆಯಾಗಲು ಬಯಸಿ 60 ಜೋಡಿಗಳು ಹೆಸರು ನೊಂದಾಯಿಸಿದ್ದರು. ಪ್ರಾಧಿಕಾರದ ವತಿಯಿಂದಲೇ ಉಚಿತವಾಗಿ ಮಧುವಿಗೆ ಮಾಂಗಲ್ಯ, ಸೀರೆ, ರವಿಕೆ ವರನಿಗೆ ಪಂಚೆ ಷರ್ಟು ಶಲ್ಯ ನೀಡಲಾಯಿತು.
ದೇವಾಲಯದ ಪಕ್ಕದಲ್ಲಿ ಇದ್ದ ಬೃಹತ್ ರಂಗ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 60 ಜೋಡಿಗಳು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.
ವಿವಾಹ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಶಾಸಕ ಆರ್.ನರೇಂದ್ರ ಅವರು ಮಹದೇಶ್ವರನ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಉಚಿತವಾಗಿ ಸಾಮೂಹಿಕ ವಿವಾಹ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿನ ಪುಣ್ಯಕ್ಷೇತ್ರದಲ್ಲಿ ಮದುವೆಯಾದವರು ಆದರ್ಶ ದಂಪತಿಯಾಗಿ ಇತರಿಗೆ ಮಾದರಿಯಾಗಬೇಕು. ಒಳ್ಳೆಯ ಬಾಳ್ವೆ ಮಾಡಬೇಕು ಎಂದು ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ವಧುವರರಿಗೆ ಮಹದೇಶ್ವರನ ಕ್ಷೇತ್ರದಲ್ಲಿ ವಿವಾಹವಾಗುವ ಅವಕಾಶ ಲಭಿಸಿರುವುದು ಪುಣ್ಯವೆಂದೇ ಭಾವಿಸಬೇಕು. ಎಲ್ಲರಿಗೂ ಇಂತಹ ಭಾಗ್ಯ ದೊರೆಯುವುದಿಲ್ಲ. ಆರ್ಥಿಕ ತೊಂದರೆ ಅನುಭವಿಸುವ ವರ್ಗದವರಿಗೆ ಉಚಿತ ಸಾಮೂಹಿಕ ವಿವಾಹ ಏರ್ಪಾಡು ಮಾಡುವುದರಿಂದ ಅನೂಕೂಲಕರವಾಗಲಿದೆ. ಪ್ರತಿ ವರ್ಷ ಮೂರು ಬಾರಿಯಾದರೂ ಕ್ಷೇತ್ರದಲ್ಲಿ ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದರೆ ಒಳಿತು ಎಂದು ಅಭಿಪ್ರಾಯ ಪಟ್ಟರು.
ಸಾಲೂರು ಬೃಹನ್ಮಾಠದ ಮಠಾಧ್ಯಕ್ಷರಾದ ಪಟ್ಟದ ಗುರುಸ್ವಾಮಿಯವರು ದಿವ್ಯಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಎಂ.ಶಿವಮ್ಮ ಕೃಷ್ಣ , ತಾಲೂಕು ಪಂಚಾಯತ್ ಅಧ್ಯಕ್ಷ ಆರ್.ರಾಜು, ಸದಸ್ಯ ಹಲಗತಂಬಡಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ, ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪ, ಸದಸ್ಯರಾದ ಕಾವೇರಿ, ದೇವರಾಜು, ಮಹದೇವು, ಜವರೇಗೌಡ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







