ಉಡುಪಿ: 50 ಚರ್ಚ್‌ಗಳಲ್ಲಿ ಸ್ವಚ್ಛ, ನಿರ್ಮಲ ಪರಿಸರ ಅಭಿಯಾನ

ಉಡುಪಿ, ಜು.1: ಉಡುಪಿ ಧರ್ಮಪ್ರಾಂತದ ಕೆಥೊಲಿಕ್ ಸಭಾ ಏಕಕಾಲ ದಲ್ಲಿ ಇತರ ಸಮಾಜಮುಖಿ ಸಂಘಟನೆಗಳ ಸಹಕಾರದೊಂದಿಗೆ ಉಡುಪಿ ಜಿಲ್ಲೆಯಾದ್ಯಂತ ರವಿವಾರ ಸ್ವಚ್ಛ ಹಾಗೂ ನಿರ್ಮಲ ಪರಿಸರ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಿತು.
ಶಂಕರಪುರದ ಸಂತ ಜೋನರ ಚರ್ಚಿನಲ್ಲಿ ಧರ್ಮಪ್ರಾಂತ ಮಟ್ಟದ ಅಭಿ ಯಾನಕ್ಕೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್ ಗಿಡ ನೆಟ್ಟು ಬಳಿಕ ರಸ್ತೆ ಬದಿಯ ಕಸವನ್ನು ಸ್ವಚ್ಛಗೊಳಿಸುವ ಮೂಲಕ ಚಾಲನೆ ನೀಡಿದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಮಾಜಿ ಅಧ್ಯಕ್ಷ ಎಲ್ರೋಯ್ ಕಿರಣ್ ಕ್ರಾಸ್ತಾ ಮಾತನಾಡಿ, ಸಾಮಾಜಿಕ ಕಳಕಳಿಯ ಜೊತೆ ನಮ್ಮನ್ನು ನಾವು ಆರೋಗ್ಯವಂತರಾಗಲು ಸ್ವಸ್ಥ ಹಾಗೂ ನಿರ್ಮಲ ಪರಿಸರ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕೆಥೊಲಿಕ್ ಸಭಾ ಕಳೆದ ಹಲವಾರು ವರ್ಷಗಳಿಂದ ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಮಾತನಾಡಿ, ಸ್ವಚ್ಚತೆಯ ಪರಿಪಾಠ ನಮ್ಮ ಹೃದಯದಿಂದ ಬಂದಾಗ ಅಭಿವೃದ್ಧಿ ಕಾಣಲು ಸಾಧ್ಯ. ಇತರ ದೇಶಗಳಿಗೆ ಹೋಲಿಸಿದರೆ ನಾವು ಭಾರತೀಯರು ಅವರಿಂದ ಸ್ವಚ್ಚತೆಯ ಬಗ್ಗೆ ಸಾಕಷ್ಟು ಕಲಿಯಲು ಇದೆ ಎಂದು ತಿಳಿಸಿದರು.
ಶಂಕರಪುರ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಪೂಜಾರಿ, ಕೆಥೊಲಿಕ್ ಸಭಾ ಪಾಂಗಾಳ ಘಟಕದ ಉಪಾಧ್ಯಕ್ಷ ವಿಕ್ಟರ್ ಮೆಂಡೊನ್ಸಾ, ರೋಟರ್ಯಾಕ್ ಕ್ಲಬ್ ಸುಭಾಸ್‌ನಗರ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಐಸಿವೈಎಂ ಅಧ್ಯಕ್ಷ ಅ್ಯರನ್ ಡಿಸೋಜ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮಾರ್ಕ್ ವಾಜ್ ಉಪಸ್ಥಿತರಿದ್ದರು.
ಸ್ವಚ್ಚತಾ ಅಭಿಯಾನದ ಪ್ರಯುಕ್ತ ಜಿಲ್ಲೆಯ 50 ಚರ್ಚುಗಳಲ್ಲಿ ಪರಿಸರ ರಕ್ಷಣೆ ಕುರಿತು ಮಾಹಿತಿ ಕಾರ್ಯಾಗಾರ, ಜಾಗೃತಿ ಶಿಬಿರ, ಸ್ವಚ್ಚತಾ ಕಾರ್ಯಕ್ರಮ, ಗಿಡಗಳ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮಗಳು ನಡೆದವು.







