ಅತ್ಯಾಚಾರಿಗಳ ಬಂಧನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ನಿರಶನ ಆರಂಭಿಸಿದ ಸಂತ್ರಸ್ತ ಬಾಲಕಿ
ಪೊಲೀಸರಿಂದ ಸಿಗದ ನ್ಯಾಯ: ಆರೋಪ

ಬರೇಲಿ,ಜು.1: ಎರಡು ತಿಂಗಳುಗಳ ಹಿಂದೆ ಸಾಮೂಹಿಕ ಅತ್ಯಾಚಾರ ಕ್ಕೊಳಗಾಗಿದ್ದಳೆನ್ನಲಾದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು, ನ್ಯಾಯ ಕೋರಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ನಿರಶನ ನಡೆಸುತ್ತಿದ್ದಾಳೆ.
14 ವರ್ಷ ವಯಸ್ಸಿನ ಈ ಬಾಲಕಿ, ತನ್ನ ಮೇಲೆ ಅತ್ಯಾಚಾರ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪೊಲೀಸರ ನಿಷ್ಕ್ರಿಯತೆಯನ್ನು ಖಂಡಿಸಿ ತಾನು ನಿರಶನ ನಡೆಸುತ್ತಿರುವುದಾಗಿ ತಿಳಿಸಿದ್ದಾಳೆ.
‘‘ ಈ ಘಟನೆ ನಡೆದು ಎರಡು ತಿಂಗಳುಗಳಾದವು. ಐದು ಮಂದಿ ಇದರಲ್ಲಿ ಭಾಗಿಯಾಗಿದ್ದರೂ, ಪೊಲೀಸರು ಈತನಕ ಇಬ್ಬರನ್ನು ಮಾತ್ರವೇ ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ವಿಚಾರಣೆ ನಡೆಸಲು ನನ್ನ ತಂದೆ ಹಾಗೂ ನನ್ನನ್ನು ಆಗಾಗ್ಗೆ ಪೊಲೀಸ್ ಠಾಣೆಗೆ ಕರೆಸಿಕೊಳ್ಳಲಾಗುತ್ತಿದೆ. ಆದರೆ ಉಳಿದ ಯಾರನ್ನೂ ಕೂಡಾ ಬಂಧಿಸಿಲ್ಲ. ಉಳಿದ ಮೂವರನ್ನು ಯಾಕೆ ಬಂಧಿಸಿಲ್ಲವೆಂಬುದನ್ನು ನಾನು ತಿಳಿಯಬಯಸುತ್ತೇನೆ’’ ಎಂದು ನಿರಶನ ನಿರತ ಬಾಲಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನ್ಯಾಯ ದೊರೆಯುವ ತನಕ ಹಾಗೂ ಈ ಹೇಯ ಕೃತ್ಯದಲ್ಲಿ ಭಾಗಿಯಾದವರೆಲ್ಲರನ್ನೂ ಬಂಧಿಸುವ ತನಕ ಉಪವಾಸ ಮುಷ್ಕರವನ್ನು ಮುಂದುವರಿಸುವುದಾಗಿ ಸಂತ್ರಸ್ತೆಯ ಕುಟುಂಬಿಕರು ಹೇಳಿದ್ದಾರೆ.
ಈ ಮಧ್ಯೆ ಬರೇಲಿ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಸತೀಶ್ ಕುಮಾರ್ ಹೇಳಿಕೆಯೊಂದನ್ನು ನೀಡಿ, ಪ್ರಕರಣದ ತನಿಖೆ ನಡೆಯುತ್ತಿದ್ದು ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ತಿಳಿಸಿದ್ದಾರೆ.





