ತುಮಕೂರು: ಅವೈಜ್ಞಾನಿಕ ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ

ತುಮಕೂರು,ಜು.02: ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-206ರ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅವೈಜ್ಞಾನಿಕ ಭೂಸ್ವಾಧೀನ ವಿರೋಧಿಸಿರುವ ರಾಷ್ಟ್ರೀಯ ಹೆದ್ದಾರಿ-206 ಸಂತ್ರಸ್ಥರ ಹೋರಾಟ ಸಮಿತಿ, ರೈತ-ಕೃಷಿ ಕಾರ್ಮಿಕರ ಸಂಘಟನೆ ಹಾಗೂ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಭೂಮಿ, ಮನೆ, ನಿವೇಶನಗಳನ್ನು ಕಳೆದುಕೊಳ್ಳುವ ಸಂತ್ರಸ್ಥರಿಗೆ ಮಾರುಕಟ್ಟೆ ಬೆಲೆಗಿಂತ ನಾಲ್ಕುಪಟ್ಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ಮಂದಿ ಪ್ರತಿಭಟನಾಕಾರರು ಹೆದ್ದಾರಿ-206ರ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಅವೈಜ್ಞಾನಿಕ ಭೂಸ್ವಾಧೀನಕ್ಕೆ ಮುಂದಾಗಿರುವ ಅಧಿಕಾರಿಗಳ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ 206ರ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂಮಿ, ಮನೆ, ನಿವೇಶನ ಮಾಲೀಕರೊಂದಿಗೆ ಚರ್ಚಿಸಿ, ಅವರ ಸಾಧಕ-ಬಾಧಕಗಳನ್ನು ಬಗ್ಗೆ ತಿಳಿದುಕೊಂಡು ನಂತರ ಭೂಸ್ವಾಧೀನಕ್ಕೆ ಮುಂದಾಗಬೇಕು. ಆದರೆ ಅಧಿಕಾರಿಗಳು ಇದ್ಯಾವುದನ್ನೂ ಮಾಡದೆ ಮಾಲೀಕರನ್ನು ಕಡೆಗಣಿಸಿ ಭೂಸ್ವಾಧೀನಕ್ಕೆ ಮುಂದಾಗಿ ವಿಫಲವಾಗಿದ್ದಾರೆ. ಅಧಿಕಾರಿಗಳ ಈ ಧೋರಣೆಯಿಂದ ಕಳೆದ ಒಂದೂವರೆ ವರ್ಷಗಳಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಅಗಲೀಕರಣದ ಅಧಿಸೂಚನೆ ಜಾರಿಯಾದ ಒಂದೂವರೆ ವರ್ಷದಿಂದ ಈ ಭಾಗದ ರೈತರು ತೋಟಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ತೆಂಗು, ಅಡಿಕೆ, ಮಾವು ಸೇರಿದಂತೆ ತೋಟಗಾರಿಕಾ ಬೆಳೆಗಳು ಒಣಗಿವೆ. ಹೊಲಗಳಲ್ಲಿ ಬೆಳೆ ಬೆಳೆಯಲಾಗಿಲ್ಲ. ಇದರಿಂದ ಆದಾಯ ಮೂಲವನ್ನೇ ಕಳೆದುಕೊಂಡಿದ್ದಾರೆ. ಈ ಕುರಿತು ಹಲವು ಬಾರಿ ಸಂತ್ರಸ್ತ ರೈತರು, ನಾಗರಿಕರು ಪ್ರತಿಭಟಿಸಿ ಸರಕಾರದ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಸರಕಾರದ ಮತ್ತು ಜಿಲ್ಲಾಡಳಿತದ ನಡವಳಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಿಪಟೂರು ತಾಲೂಕಿನ ಹುಚ್ಚಗೊಂಡನಹಳ್ಳಿ, ಈಡೇನಹಳ್ಳಿ, ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ಇನ್ನಿತರ ಕಡೆಗಳಲ್ಲಿ ಅಲೈನ್‍ಮಂಟ್ ಲೋಪದೋಷಗಳನ್ನು ಸರಿಪಡಿಸಬೇಕು. ಸರ್ವೆ ಕಾರ್ಯಕ್ಕೂ ಮುನ್ನ ಪ್ರತಿ ಗ್ರಾಮದಲ್ಲೂ ರೈತರು, ನಾಗರಿಕರ ಸಭೆ ಕರೆದು ಅವರ ಗೊಂದಲಗಳನ್ನು ನಿವಾರಿಸಬೇಕು. ಸಂತ್ರಸ್ತರಿಗೆ ಮೊದಲೇ ಯೋಜನಾ ನಿರಾಶ್ರಿತರ ಪ್ರಮಾಣ ಪತ್ರವನ್ನು ನೀಡಬೇಕು ಹಾಗೂ ಸಂತ್ರಸ್ತ ಕುಟುಂಬದವರಿಗೆ ಅವರವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಸರಕಾರಿ ಉದ್ಯೋಗ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ 206 ಸಂತ್ರಸ್ತರ ಹೋರಾಟ ಸಮಿತಿಯ ಎಸ್.ಎನ್. ಸ್ವಾಮಿ, ರೈತ-ಕೃಷಿ ಕಾರ್ಮಿಕರ ಸಂಘಟನೆಯ ಬೈರನಾಯಕನಹಳ್ಳಿ ಲೋಕೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.







