ನಿರಾಶಾದಾಯಕ ಭಾಷಣ: ಯಡಿಯೂರಪ್ಪ

ಬೆಂಗಳೂರು, ಜು.2: ರಾಜ್ಯ ಸರಕಾರವು ರಾಜ್ಯಪಾಲರ ಮೂಲಕ ನಿರಾಶಾದಾಯಕ ಭಾಷಣ ಮಾಡಿಸಿದೆ. ಇದರಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೆ ಸ್ಪಷ್ಟವಾದ ಸೂಚನೆಗಳಿಲ್ಲ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿ ರಾಜ್ಯಪಾಲರ ಭಾಷಣದ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ನೀರಾವರಿ, ರೈತರ ಸಮಸ್ಯೆಗಳು ಸೇರಿದಂತೆ ಯಾವುದೇ ವಿಚಾರಗಳ ಬಗ್ಗೆ ಈ ಭಾಷಣದಲ್ಲಿ ಉಲ್ಲೇಖವಿಲ್ಲ ಎಂದರು.
ಮೈತ್ರಿ ಸರಕಾರದ ನಡುವಿನ ಗೊಂದಲ ಈ ಭಾಷಣದಲ್ಲಿ ಕಂಡು ಬಂದಿದೆ. ರೈತರ ಸಾಲ ಮನ್ನಾ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರಾಜ್ಯದ ಹಿಂದಿನ ಸರಕಾರದ ಯೋಜನೆಗಳಾಗಲಿ, ಕೇಂದ್ರ ಸರಕಾರದ ಯೋಜನೆಗಳ ಅನುದಾನ ಬಳಕೆ ಬಗ್ಗೆಯೂ ಪ್ರಸ್ತಾಪ ಮಾಡಲಾಗಿಲ್ಲ ಎಂದು ಅವರು ಹೇಳಿದರು.
ಇದೊಂದು ನಿರಾಶಾದಾಯಕವಾದ ಭಾಷಣವಾಗಿದ್ದು, ನಾನು ಈಗಲೇ ಯಾವುದೇ ಟೀಕೆ ಟಿಪ್ಪಣಿಗಳನ್ನು ಮಾಡುವುದಿಲ್ಲ. ಜು.5ರಂದು ಬಜೆಟ್ ಮಂಡನೆಯಾಗಲಿ, ಆನಂತರ ನಾವು ಏನು ಮಾಡಬೇಕು ಎಂಬುದರ ಕುರಿತು ನಿರ್ಧಾರ ಮಾಡುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದರು.





