‘ಮೊಬೈಲ್ ವೇದಿಕೆ’ಯಲ್ಲಿ ಸರಕಾರಿ ಸೇವೆ: ರಾಜ್ಯಪಾಲ ವಜೂಭಾಯಿ ವಾಲಾ

ಬೆಂಗಳೂರು, ಜು. 2: ರಾಜ್ಯ ಸರಕಾರ ರಾಷ್ಟ್ರದಲ್ಲೆ ಪ್ರಪ್ರಥಮ ಬಾರಿಗೆ ಎಲ್ಲ ಇಲಾಖೆಗಳ ಸೇವೆಗಳನ್ನು ಏಕೀಕೃತವಾದ ಒಂದೇ ಮೊಬೈಲ್ ವೇದಿಕೆಯಡಿ ಒದಗಿಸಲಾಗುವುದು ಎಂದು ರಾಜ್ಯಪಾಲ ವಜೂಭಾಯಿ ವಾಲಾ ಘೋಷಿಸಿದ್ದಾರೆ.
ಸೋಮವಾರ ವಿಧಾನ ಮಂಡಲ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ರಾಜ್ಯದಲ್ಲಿ ಎಲ್ಲ ನಾಡಕಚೇರಿ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ಸೇವೆಗಳಿಗೆ ಡಿಜಿ ಲಾಕರ್‌ಅನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಇದೇ ವೇಳೆ ಪ್ರಕಟಿಸಿದರು.
ಮಾಹಿತಿ ಅಗತ್ಯತೆಗಳನ್ನು ಪೂರೈಸಲು ವಿಶ್ವಾಸಾರ್ಹವಾದ ವ್ಯವಸ್ಥೆಯನ್ನು ಒದಗಿಸಲು ಕರ್ನಾಟಕ ರಾಜ್ಯ ವಿಸ್ತೃತ ಪ್ರದೇಶ ಸಂಪರ್ಕ(ಕೆಸ್ವಾನ್) ಜಾಲವನ್ನು ಅಭಿವೃದ್ಧಿಪಡಿಸಿದೆ. ಇದರಿಂದ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸರಕಾರಿ ಕಚೇರಿಗಳನ್ನು ಸಂಪರ್ಕಿಸಲಾಗಿದೆ.
ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ವಿಡಿಯೋ ಸಮಾವೇಶಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ, ಎರಡನೆ ವಿಡಿಯೋ ಸಮಾವೇಶ ಸೌಕರ್ಯವನ್ನು ಕಲ್ಪಿಸುವ ವ್ಯವಸ್ಥೆ ಪ್ರಗತಿಯಲ್ಲಿದೆ ಎಂದ ಅವರು, ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ನನ್ನ ಸರಕಾರ ಬದ್ಧವಾಗಿದೆ ಎಂದರು.





