ಚಂಪಾಗೆ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ
ಬೆಂಗಳೂರು, ಜು.2: ಕನ್ನಡ ಜನಶಕ್ತಿ ಕೇಂದ್ರದಿಂದ ನೀಡುವ ‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’ಯನ್ನು ಪ್ರಸಕ್ತ ಸಾಲಿನಲ್ಲಿ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್‌ಗೆ ನೀಡಲಾಗುತ್ತಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಶಾಂತವೇರಿ ಗೋಪಾಲಗೌಡರ ಜೀವನಾದರ್ಶಗಳನ್ನು ಪಾಲಿಸಿಕೊಂಡು ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವರನ್ನು ಗುರುತಿಸಿ ಸಂಸ್ಥೆ ಕಳೆದ 20 ವರ್ಷಗಳಿಂದ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ಪ್ರಸಕ್ತ ಸಾಲಿಗೆ ಸಮಾಜವಾದಿ, ಬಂಡಾಯ ಸಾಹಿತಿ ಹಾಗೂ ಸಂಘಟಕ, ಕನ್ನಡ ಪರ ಹೋರಾಟಗಾರರೂ ಆಗಿರುವ ಪ್ರೊ. ಚಂಪಾಗೆ ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ತೀರ್ಮಾನಿಸಿದೆ ಎಂದು ತಿಳಿಸಿದರು.
ಪ್ರಶಸ್ತಿಯು 25 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು, ಜು. 16ರಂದು ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ಪೇಟೆ ಕೃಷ್ಣ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಲೇಖಕ ಡಾ. ರಾಜೇಂದ್ರ ಚೆನ್ನಿ, ವಕೀಲ ಕೆ. ದಿವಾಕರ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.