'ರಾಷ್ಟ್ರದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಸರಕಾರದಿಂದ ರೈತರಿಗಾಗಿ ವಿಶಿಷ್ಟ ಯೋಜನೆ'
ರಾಜ್ಯಪಾಲ ವಜೂಭಾಯಿ ವಾಲಾ

ಬೆಂಗಳೂರು, ಜು. 2: ‘ರೈತರೆ, ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬೇಡಿ, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಖಚಿತಪಡಿಸುವ ಮಾದರಿ-ಪ್ರಾಯೋಗಿಕ ಯೋಜನೆಯನ್ನು ರಾಷ್ಟ್ರದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಸರಕಾರ ಜಾರಿಗೆ ತರಲಿದೆ’ ಎಂದು ರಾಜ್ಯಪಾಲ ವಜೂಭಾಯಿ ವಾಲಾ, ಮೈತ್ರಿ ಸರಕಾರ ಮುನ್ನೋಟವನ್ನು ಪ್ರಕಟಿಸಿದ್ದಾರೆ.
ಸೋಮವಾರ ರಾಜಭವನದಿಂದ ಮಧ್ಯಾಹ್ನ 12:30ಕ್ಕೆ ಸರಿಯಾಗಿ ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಸಿಎಂ ಕುಮಾರಸ್ವಾಮಿ, ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ, ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್, ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ ಕಾನೂನು ಸಚಿವ ಕೃಷ್ಣಬೈರೇಗೌಡ ಸ್ವಾಗತಿಸಿ, ವಿಧಾನಸಭೆಗೆ ಕರೆತಂದರು. ರಾಜ್ಯಪಾಲರು ವಿಧಾನಸಭೆ ಸ್ಪೀಕರ್ ಪೀಠದ ಬಳಿಗೆ ಆಗಮಿಸುತ್ತಿದ್ದಂತೆ ರಾಷ್ಟ್ರಗೀತೆ ಮೊಳಗಿತು. 12:30ಕ್ಕೆ ಸರಿಯಾಗಿ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ತಮ್ಮ ಭಾಷಣ ಆರಂಭಿಸಿದ ವಿ.ಆರ್.ವಾಲಾ ಅವರು, ಅನುಭವಿಗಳ ಜ್ಞಾನ ಹೊಸ ಸದಸ್ಯರಿಗೆ ಮಾರ್ಗಸೂಚಿಯಾಗಲಿ ಎಂದು ಆಶಿಸಿದರು.
ಮುಂದಿನ ದಿನಗಳಲ್ಲಿ ನನ್ನ ಸರಕಾರ ಹೊಸದೃಷ್ಟಿ-ಹೊಸ ದಾರಿಯಲ್ಲಿ ಹೆಜ್ಜೆ ಇಡಲಿದೆ. ಸಮಾಜದ ಎಲ್ಲ ವರ್ಗದ ಅದರಲ್ಲೂ ಅವಕಾಶ ವಂಚಿತರು, ಹಿಂದುಳಿದವರು, ಮಹಿಳೆಯರು, ಯುವಜನಾಂಗ ಹಾಗೂ ರೈತರ ಕಲ್ಯಾಣಕ್ಕೆ ಬದ್ಧ. ಹಳ್ಳಿ-ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ಸರಿಸಮಾನ ಯೋಜನೆ ರೂಪಿಸಲಿದೆ ಎಂದು ಘೋಷಿಸಿದರು. ಎಸ್ಸಿ-ಎಸ್ಟಿ ವರ್ಗದ ನಿರುದ್ಯೋಗಿ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಿದೆ. ರಾಜ್ಯದಲ್ಲಿನ ಮುಸ್ಲಿಮ್ ಮಹಿಳೆಯರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಯೋಜನೆ ರೂಪಿಸಲಿದೆ ಎಂದ ಅವರು, ಆನ್‌ಲೈನ್ ಪಡಿತರ ಅರ್ಜಿ ಯೋಜನೆ ಜಾರಿಯಲ್ಲಿದೆ ಎಂದು ಹಿಂದಿನ ಸರಕಾರ ಯೋಜನೆಗಳನ್ನು ಪುನರುಚ್ಚರಿಸಿದರು.
ಪಾವಗಡದಲ್ಲಿ 2 ಸಾವಿರ ಮೆ.ವ್ಯಾ.ಸೌರ ವಿದ್ಯುತ್ ಘಟಕ ಸ್ಥಾಪಿಸಿದ್ದು, ರಾಜ್ಯದ ಎಲ್ಲ ತಾಲೂಕುಗಳಲ್ಲಿ 20 ಮೆ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪಿಸುವ ಮೂಲಕ 26,985 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಅನಿಲ ಸಂಪರ್ಕ, ನದಿಗಳ ನೀರಿನ ಗುಣಮಟ್ಟ ಕಾಪಾಡಲು ವೈಜ್ಞಾನಿಕ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಕ್ಲಾಸ್ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನೀಲಿಕ್ರಾಂತಿ: ಮೀನುಗಾರಿಕೆ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆ ಸಂಯೋಜನೆಯೊಂದಿಗೆ ನೀಲಿಕ್ರಾಂತಿ ಕಾರ್ಯಕ್ರವನ್ನು ಅನುಷ್ಠಾನಗೊಳಿಸಲಾಗುವುದು ಎಂದ ಅವರು, ಸರ್ವ ಋತು ರಸ್ತೆಗಳನ್ನು ನಿರ್ಮಿಸುವ ಮೂಲಕ ಗ್ರಾಮ ಸಂಪರ್ಕ ಅಭಿವೃದ್ಧಿಗೆ ಆಸ್ಥೆ ವಹಿಸಲಾಗುವುದು ಎಂದು ಆಭಯ ನೀಡಿದರು. 2021ರ ಮಾರ್ಚ್ ವೇಳೆ 118 ಕಿ.ಮೀ ಉದ್ಧದ ಬೆಂಗಳೂರು ಮೆಟ್ರೋ ಮಾರ್ಗವನ್ನು ಪೂರ್ಣಗೊಳಿಸಲಿದ್ದು, ಪ್ರಸ್ತುತ ಇರುವ 3.6ಲಕ್ಷ ಪ್ರಯಾಣಿಕ ಸಂಖ್ಯೆಯನ್ನು 20 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ವಜೂಭಾಯಿ ವಾಲಾ ಅವರು ಇದೇ ವೇಳೆ ತಿಳಿಸಿದರು.
ಸರಕಾರದ ಯೋಜನೆಗಳನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಹಾಗೂ ಜನರಿಗೆ ತಲುಪಿಸಲು ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸೋಣ ಎಂದು ರಾಜ್ಯಪಾಲರು ಕರೆ ನೀಡಿದರು. ಆದರೆ, ರಾಜ್ಯದ ರೈತರು ಹಾಗೂ ಸಾರ್ವಜನಿಕರು ಬಹುನಿರೀಕ್ಷೆ ಹೊಂದಿದ್ದ ರೈತರ ಸಾಲಮನ್ನಾ ಬಗ್ಗೆ ಭಾಷಣದಲ್ಲಿ ಎಲ್ಲಿಯೂ ಪ್ರಸ್ತಾಪಿಸಲಿಲ್ಲ. ಕೇವಲ 30 ನಿಮಿಷಗಳಲ್ಲಿ ತಮ್ಮ ಭಾಷಣವನ್ನು ಪೂರ್ಣಗೊಳಿಸಿದ ರಾಜ್ಯಪಾಲರು ಎಲ್ಲರಿಗೆ ವಂದಿಸಿ ಹೊರ ನಡೆದರು.
‘ಕರ್ನಾಟಕವು ಆರ್ಥಿಕ ಸ್ಥಿತಿಯನ್ನು ದಕ್ಷತೆಯಿಂದ ನಿರ್ವಹಿಸುವುದರಲ್ಲಿ ಹೆಸರಾಗಿದೆ. ಆರ್ಥಿಕ ಸ್ಥಿತಿ ಉತ್ತಮಪಡಿಸಲು ವಿತ್ತೀಯ ಕ್ರೋಡೀಕರಣ ನಕ್ಷೆಯನ್ನು ರೂಪಿಸುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ’
-ವಜೂಭಾಯಿ ವಾಲಾ ರಾಜ್ಯಪಾಲ







