ಲೋಕಪಾಲರ ನೇಮಕ: 10 ದಿನಗಳೊಳಗೆ ತಿಳಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ಜು.2: ಲೋಕಾಯುಕ್ತರ ನೇಮಕಾತಿ ಯಾವಾಗ ನಡೆಯಲಿದೆ ಎಂಬ ಬಗ್ಗೆ 10 ದಿನದೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಲೋಕಾಯುಕ್ತರನ್ನು ನೇಮಿಸುವಂತೆ ಕಳೆದ ವರ್ಷದ ಎಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿದ್ದರ ಹೊರತಾಗಿಯೂ ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿ ಎನ್‌ಜಿಒ ಸಂಸ್ಥೆಯೊಂದು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಸಂದರ್ಭ ಕೇಂದ್ರಕ್ಕೆ ಸೂಚನೆ ನೀಡಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಜುಲೈ 17ಕ್ಕೆ ನಿಗದಿಗೊಳಿಸಿದೆ.
ಕೇಂದ್ರ ಸರಕಾರವು ಈ ವಿಷಯದಲ್ಲಿ ನೀಡಿರುವ ಲಿಖಿತ ಮಾಹಿತಿಯನ್ನು ಸರಕಾರದ ಪ್ರತಿನಿಧಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ನ್ಯಾಯಪೀಠಕ್ಕೆ ಸಲ್ಲಿಸಿದರು. ಲೋಕಪಾಲ ಕಾಯ್ದೆಗೆ ತಿದ್ದುಪಡಿ ಬಯಸಿರುವ ಮಸೂದೆಗೆ ಅನುಮೋದನೆ ದೊರೆತಿಲ್ಲ ಎಂಬ ಕಾರಣ ನೀಡುವುದು ಸರಿಯಲ್ಲ ಎಂದು ಈ ಹಿಂದೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸ್ಪಷ್ಟವಾಗಿ ತಿಳಿಸಿತ್ತು. ಇದಕ್ಕೆ ಕಳೆದ ಮೇ 15ರಂದು ಉತ್ತರಿಸಿದ್ದ ಕೇಂದ್ರ ಸರಕಾರ, ಹಿರಿಯ ವಕೀಲ ಮುಕುಲ್ ರೋಹಟ್ಗಿಯವರನ್ನು ಆಯ್ಕೆ ಸಮಿತಿಯಲ್ಲಿ ಶ್ರೇಷ್ಟ ನ್ಯಾಯಾಧೀಶರೆಂದು ನೇಮಿಸಲಾಗಿದೆ ಎಂದು ಉತ್ತರಿಸಿತ್ತು.







