ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಿಂದ ನೂತನ ರೋಬೋಟ್, ವಾಕಿಂಗ್ ಸ್ಟಿಕ್ ಸಂಶೋಧನೆ

ಬೆಂಗಳೂರು, ಜು.2: ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅಂಧರಿಗೆ ನೆರವಾಗುವ ವಾಕಿಂಗ್ ಸ್ಟಿಕ್ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವ ರೋಬೋಟ್ ತಯಾರಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಧ್ಯಾಪಕಿ ಪ್ರೊ. ರಮ್ಯಾ, ಎಂಜಿನಿಯರಿಂಗ್‌ನ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಹರ್ಷ, ಅನುದೀಪ್ ಹಾಗೂ ಅರವಿಂದ ವಿದ್ಯುತ್ ಚಾಲಿತ ಹೆಕ್ಸಾಪಾಡ್ ರೋಬೋಟ್ ಅನ್ನು ಕಂಡು ಹಿಡಿದಿದ್ದಾರೆ ಎಂದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಇದನ್ನು ಬಳಸಬಹುದು. ಆರು ಕಾಲಿನ ಈ ರೋಬೋಟ್‌ಗೆ ಹದಿನೇಳು ಕೆ.ಜಿ ವರೆಗೂ ಭಾರವಿರುವ ವಸ್ತುಗಳನ್ನು ಹೊತ್ತೊಯ್ಯುವ ಶಕ್ತಿ ಇದೆ. 18 ಸರ್ವರ್‌ಗಳನ್ನೊಳಗೊಂಡಿರುವ ಇದು ತುರ್ತು ಸಂದರ್ಭಗಳಲ್ಲಿ ಹೆಚ್ಚು ಉಪಯೋಗಕ್ಕೆ ಬರಲಿದೆ ಎಂದು ತಿಳಿಸಿದರು. ಈ ರೋಬೋಟ್ ಎಲ್ಲ ಪ್ರದೇಶಗಳಲ್ಲೂ ಸಂಚರಿಸಲಿದೆ. ಇದು ಸಂಚರಿಸುವಾಗ ಯಾವುದಾದರೂ ವಸ್ತು ಅಡ್ಡ ಬಂದರೆ ತಾನಾಗಿಯೇ ದಿಕ್ಕು ಬದಲಿಸಲಿದೆ. ಹಾಗೆಯೇ ಕ್ಯಾಮೆರಾ ಅಳವಡಿಸಲಾಗಿದ್ದು, ಬ್ಲಿಂಕ್ ಆ್ಯಪ್ ಮೂಲಕ ರೋಬೋಟ್ ಅನ್ನು ನಿಯಂತ್ರಿಸಬಹುದು. 24 ಸಾವಿರ ರೂ.ಗಳ ವೆಚ್ಚದಲ್ಲಿ ತಯಾರಾಗಿರುವ ಈ ರೋಬೋಟ್ ಬ್ಯಾಟರಿ ಮೂಲಕ ಕಾರ್ಯ ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.
ಪ್ರಾಧ್ಯಾಪಕ ಡಾ.ಕೆ.ಎನ್.ರವಿ ಮಾತನಾಡಿ, ಆಧುನಿಕತೆಗೆ ತಕ್ಕಂತೆ ಅಂಧರಿಗಾಗಿ ವಾಕಿಂಗ್ ಸ್ಟಿಕ್ ತಯಾರಿಸಲಾಗಿದೆ. 24 ಗಂಟೆಯೂ ಕಾರ್ಯಾಚರಣೆ ಮಾಡುವ ಇದಕ್ಕೆ ರಿಮೋಟ್ ಸಿದ್ಧಪಡಿಸಲಾಗಿದೆ. ಎಲ್ಲಾದರು ಇಟ್ಟು ಮರೆತುಬಿಟ್ಟರೆ ರಿಮೋಟ್ ಒತ್ತಿದರೆ ಸ್ಟಿಕ್ ಶಬ್ದ ಮಾಡುತ್ತದೆ. ಒಂದು ಸಾವಿರ ರೂಪಾಯಿಯಲ್ಲಿ ತಯಾರಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಹರ್ಷ, ಎಚ್.ಡಿ.ಪವನ್‌ಕುಮಾರ್, ಎಸ್. ಪಲ್ಲವಿ, ಎಚ್.ಪೂರ್ವ, ಶಿಲ್ಪ ಉಪಸ್ಥಿತರಿದ್ದರು.







