ನೀರು ವಿತರಣಾ ವ್ಯವಸ್ಥೆ ಸುಧಾರಣೆಗೆ ಯೋಜನೆ: ರಾಜ್ಯಪಾಲ ವಜುಭಾಯಿ ವಾಲಾ

ಬೆಂಗಳೂರು, ಜು.2: ಜಪಾನ್ ಅಂತಾರಾಷ್ಟ್ರೀಯ ಸಹಕಾರಿ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ, ಲೆಕ್ಕಕ್ಕೆ ಸಿಗದೆ ಹರಿಯುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುವ ಮತ್ತು ಸೋರಿಕೆ ನಿಯಂತ್ರಿಸುವ ಮೂಲಕ ನೀರು ವಿತರಣಾ ವ್ಯವಸ್ಥೆಯನ್ನು ಸುಧಾರಿಸುವುದಕ್ಕಾಗಿ ಬೆಂಗಳೂರಿನಲ್ಲಿ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು, ಇದು 2022ರ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಬೆಂಗಳೂರು ವಿಶ್ವ ಮಾನ್ಯತೆ ಪಡೆದಿರುವ ನಗರ. ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿಯಾಗಿರುವ ಬೆಂಗಳೂರು ಜ್ಞಾನ ನಗರಿಯೂ ಹೌದು ಎಂದರು. ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಬೆಂಗಳೂರಿನ ಹತ್ತಾರು ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿವೆ. ಕರ್ನಾಟಕ, ಅದರಲ್ಲಿಯೂ ಬೆಂಗಳೂರಿನ ವಿಜ್ಞಾನಿಗಳು ಹಾಗೂ ತಂತ್ರಜ್ಞಾನಿಗಳು ವಿಶ್ವದೆಲ್ಲೆಡೆ ಪಸರಿಸಿದ್ದಾರೆ. ಈ ಖ್ಯಾತಿಯನ್ನು ಹೆಚ್ಚಿಸಲು ನನ್ನ ಸರಕಾರ ಬದ್ಧವಾಗಿದೆ ಎಂದು ರಾಜ್ಯಪಾಲರು ಹೇಳಿದರು.
ಬೆಂಗಳೂರಿನಲ್ಲಿ ಮೂಲಸೌಲಭ್ಯಗಳ ಕೊರತೆಯ ಅರಿವು ನನ್ನ ಸರಕಾರಕ್ಕಿದೆ. ಸಂಚಾರ ದಟ್ಟಣೆ ನಿಯಂತ್ರಣ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಯೋಜನೆಗಳನ್ನು ಬೆಂಗಳೂರಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಮೆಟ್ರೋ ರೈಲು ನಿಗಮವು 2021ರ ಮಾರ್ಚ್ ಹೊತ್ತಿಗೆ 118 ಕಿಲೋಮೀಟರ್ ಉದ್ದದ ಮಾರ್ಗವನ್ನು ಪೂರ್ಣಗೊಳಿಸಲಿದೆ. ಪ್ರಸ್ತುತ ಒಂದು ದಿನಕ್ಕೆ ಸರಾಸರಿ 3.6 ಲಕ್ಷ ಪ್ರಯಾಣಿಕರು ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಭವಿಷ್ಯದಲ್ಲಿ ಈ ಸಂಖ್ಯೆಯು ಸುಮಾರು 20 ಲಕ್ಷಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ರಾಜ್ಯಪಾಲರು ಹೇಳಿದರು.
ಸಾರ್ವಜನಿಕ ಬೈಸಿಕಲ್ ಬಾಡಿಗೆ ನೀಡುವ ವ್ಯವಸ್ಥೆಯನ್ನು ಮೈಸೂರಿನಲ್ಲಿ ಕಾರ್ಯರೂಪಕ್ಕೆ ತಂದಿದೆ. ಈ ಮೂಲಕ ರಾಷ್ಟ್ರಮಟ್ಟದ ವಿಶೇಷ ಚಾಲನಾ ಪ್ರಶಸ್ತಿಗೆ ಪಾತ್ರವಾಗಿದೆ. ಬೈಸಿಕಲ್ ಬಾಡಿಗೆಗೆ ನೀಡುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿಯೂ ವಿಸ್ತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ನಗರದ ಹೃದಯ ಭಾಗಗಳಲ್ಲಿ ಸಮರ್ಥ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದಕ್ಕಾಗಿ ಯೋಜಿಸುತ್ತಿದೆ. ಬಸ್ ಪ್ರಯಾಣಿಕರಿಗೆ ಉಚಿತ ವೈ-ಫೈ ಸೌಲಭ್ಯ, ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಬಸ್‌ಗಳಲ್ಲಿ ಕ್ಲೋಸ್ಡ್ ಸರ್ಕೀಟ್ ಕ್ಯಾಮೆರಾ, ಪ್ಯಾನಿಕ್ ಅಲಾರಂ ಹಾಗೂ ಮೊಬೈಲ್ ಆ್ಯಪ್‌ನಲ್ಲಿ ಎಸ್‌ಓಎಸ್ ಬಟನ್ ಒದಗಿಸಲು ಯೋಜಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದರು.
ರಾಜ್ಯವು ಮಾಹಿತಿ ತಂತ್ರಜ್ಞಾನ ರಫ್ತಿನ ಮೂಲಕ ಸುಮಾರು 3 ಲಕ್ಷ ಕೋಟಿ ರೂ. ಹಾಗೂ ಭಾರತದ ಜೈವಿಕ ಉದ್ಯಮ ಆದಾಯದ ಶೇ.35ಕ್ಕಿಂತ ಹೆಚ್ಚಿನ ಕೊಡುಗೆಯನ್ನು ನೀಡಿದೆ. 7 ಸಾವಿರ ನವೋದ್ಯಮಗಳ ಸ್ಥಾಪನೆಯ ಮೂಲಕ ಬೆಂಗಳೂರು ನವೋದ್ಯಮದ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.







