ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ: ತನಿಖೆ ಕುರಿತ ದಾಖಲೆಗಳನ್ನು ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಜು.2: ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆ ಕುರಿತು ದಾಖಲೆಗಳ ಮೂಲ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ತನಿಖಾಧಿಕಾರಿಗೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.
ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ತಂದೆ ಅಶೋಕ್‌ಕುಮಾರ್ ಸಿನ್ಹಾ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು ಈ ನಿರ್ದೇಶನ ನೀಡಿದರು. ಅಲ್ಲದೆ, ದಾಖಲೆಗಳು ಯಾರಿಗೂ ಲಭ್ಯವಾಗದಂತೆ ಗೌಪ್ಯವಾಗಿರಿಸುವಂತೆ ತನಿಖಾಧಿಕಾರಿಗೆ ಸಲಹೆ ನೀಡಿ, ವಿಚಾರಣೆಯನ್ನು ಜು.5ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಸಿಐಡಿ ತನಿಖಾಧಿಕಾರಿ ಪರ ಸರಕಾರಿ ವಕೀಲರು ನ್ಯಾಯಾಲಯಕ್ಕೆ ತನಿಖೆಯ ಪ್ರಗತಿ ವರದಿ ಸಲ್ಲಿಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆ ಚುರುಕಾಗಿ ನಡೆಯುತ್ತಿದೆ. ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಕೆಲವೊಂದು ಮಹತ್ವದ ಮಾಹಿತಿ ಸಂಗ್ರಹಿಸಲಾಗಿದೆ. ಗೌಪ್ಯತೆಯ ದೃಷ್ಟಿಯಿಂದ ತನಿಖೆಯ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಇದರಿಂದ ಸರಕಾರಿ ವಕೀಲರನ್ನು ತಮ್ಮ ಬಳಿಗೆ ಕರೆಸಿಕೊಂಡ ನ್ಯಾಯಮೂರ್ತಿಗಳು ತನಿಖಾ ವಿವರಗಳ ಮಾಹಿತಿ ಕೇಳಿ ತಿಳಿದುಕೊಂಡರು. ನಂತರ ತನಿಖಾ ಪ್ರಗತಿ ವರದಿಯನ್ನು ದಾಖಲಿಸಿಕೊಂಡ ನ್ಯಾಯಮೂರ್ತಿ, ತನಿಖೆಯ ವೇಳೆ ಸಂಗ್ರಹಿಸಿದ ದಾಖಲೆಗಳ ಮೂಲ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಬೇಕು. ಹಾಗೆಯೇ, ತನಿಖೆಯ ಮಾಹಿತಿ ಯಾರಿಗೂ ಲಭ್ಯವಾಗದಂತೆ ಎಚ್ಚರವಹಿಸಬೇಕು ಎದು ತನಿಖಾಧಿಕಾರಿಗೆ ನಿರ್ದೇಶಿಸಿದರು.







