ಪತ್ರಕರ್ತರ ಹತ್ಯೆ ಪ್ರಕರಣ: ಬಿಜೆಪಿಯ ಮಿತ್ರ ಪಕ್ಷದ 3 ನಾಯಕರು, 300 ಸದಸ್ಯರ ವಿರುದ್ಧ ಪ್ರಕರಣ ದಾಖಲು

ಹೊಸದಿಲ್ಲಿ, ಜು. 2: ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿದ ಇಬ್ಬರು ಪತ್ರಕರ್ತರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬಿಜೆಪಿ ಮಿತ್ರ ಪಕ್ಷವಾದ ತ್ರಿಪುರಾದ ಐಪಿಎಫ್‌ಟಿಯ ಮೂವರು ನಾಯಕರು ಹಾಗೂ 300ರಿಂದ 500 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದೆ.
ಪಶ್ಚಿಮ ತ್ರಿಪುರಾ ಜಿಲ್ಲೆಯ ಮಂಡ್ವಾಯಿ ಪ್ರದೇಶದಲ್ಲಿ ರಸ್ತೆ ತಡೆ ಬಗ್ಗೆ ವರದಿ ಮಾಡಲು ತೆರಳಿದ್ದ ಸ್ಥಳೀಯ ಟಿ.ವಿ. ವಾಹಿನಿ ಒಂದರ ವರದಿಗಾರ ಸಂತನು ಭೌಮಿಕ್ ಅವರನ್ನು ಹತ್ಯೆಗೈಯಲಾಗಿತ್ತು. ಅಲ್ಲದೆ, ಕಳೆದ ವರ್ಷ ನವೆಂಬರ್ 20ರಂದು ಇದೇ ಜಿಲ್ಲೆಯ ಆರ್.ಕೆ. ನಗರದಲ್ಲಿ ತ್ರಿಪುರಾ ಸ್ಟೇಟ್ ರೈಫಲ್ಸ್‌ನ ಕೇಂದ್ರ ಕಚೇರಿಯ ಒಳಗೆ ಪತ್ರಿಕೆಯ ಕ್ರೈಮ್ ವರದಿಗಾರ ಸುದೀಪ್ ದತ್ತ್ ಅನ್ನು ಹತ್ಯೆಗೈಯಲಾಗಿತ್ತು.
ಈ ಎರಡು ಪ್ರಕರಣಗಳಿಗೆ ಸಂಬಂಧಿಸಿ ಬಿಜೆಪಿಯ ಮಿತ್ರ ಪಕ್ಷವಾದ ಐಪಿಎಫ್‌ಟಿ ನಾಯಕರಾದ ಬಲರಾಮ್ ದೇವ್ ವರ್ಮಾ , ಧೀರೇಂದ್ರ ದೇವ್ ವರ್ಮಾ, ಪಕ್ಷದ ಮಾಂಡ್ವಿ ವಿಭಾಗೀಯ ಸಮಿತಿ ಅಧ್ಯಕ್ಷ ಅಮಿತ್ ದೇವ್ ವರ್ಮಾ ಹಾಗೂ ಪಕ್ಷದ ಅಪರಿಚಿತ 300ರಿಂದ 500 ಮಂದಿ ಸದಸ್ಯರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.





