ಹಿಮಾಲಯ ಪರ್ವತ ಏರಿದ ಅರಣ್ಯ ರಕ್ಷಕ ವಿಕ್ರಮ್‌ಗೆ ಸಿಎಂ ಅಭಿನಂದನೆ

ಬೆಂಗಳೂರು, ಜು.2: ಹಿಮಾಲಯ ಪರ್ವತ ಯಶಸ್ವಿಯಾಗಿ ಏರಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಅರಣ್ಯ ರಕ್ಷಕ ವಿಕ್ರಮ್.ಸಿ (25) ಅವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಹಿಮಾಲಯ ಪರ್ವತ ಏರಿದ ಯಶೋಗಾಥೆಯನ್ನು ವಿಕ್ರಮ್ ವಿವರಿಸಿದರು. ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕುಮಾರಸ್ವಾಮಿ, ನಿಮ್ಮ ಸಾಧನೆ ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು.
ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ವಿಜಯಪುರ ಗ್ರಾಮದವರಾದ ವಿಕ್ರಮ್, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಏನಾದರೊಂದು ಸಾಧಿಸಬೇಕೆಂದು ಛಲ ಹೊಂದಿದ್ದ ಅವರು ಹಿಮಾಲಯ ಪರ್ವತವೇರುವ ಸಾಹಸಕ್ಕೆ ಕೈ ಹಾಕಿದ್ದರು.
ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿಕ್ರಮ್, ಹಿಮಾಲಯ ಪರ್ವತವೇರಲು ಸಾಕಷ್ಟು ತಯಾರಿ ನಡೆಸಿದ್ದರು. ಪರ್ವತಾರೋಹಿಗಳಿಗೆ ನಡೆದ ಆಯ್ಕೆ ಸಂದರ್ಶನದಲ್ಲಿ ದೇಶದ ವಿವಿಧ ಭಾಗಳಿಂದ 25 ಮಂದಿ ಆಯ್ಕೆಯಾಗಿದ್ದರು. ಅದರಲ್ಲಿ ಯಶಸ್ವಿಯಾಗಿ ಹಿಮಾಲಯ ಪರ್ವತವನ್ನು ಏರಿದ 8 ಮಂದಿಗಳ ಪೈಕಿ ವಿಕ್ರಮ್ ಕೂಡ ಒಬ್ಬರು. ಇನ್ನೂ ವಿಶೇಷವೆಂದರೆ ಕರ್ನಾಟಕದವರ ಪೈಕಿ ಇವರೊಬ್ಬರೇ ಈ ಕೀರ್ತಿ ಪತಾಕೆ ಹಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.







