ಹ್ಯೂಬ್ಲೊಟ್ ವಾಚ್ ಪ್ರಕರಣ: ಆರ್‌ಟಿಐ ಮೂಲಕ ಮಾಹಿತಿ ಪಡೆಯಲು ಅರ್ಜಿದಾರನಿಗೆ ಹೈಕೋರ್ಟ್ ಸಲಹೆ

ಬೆಂಗಳೂರು, ಜು.2: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಹ್ಯೂಬ್ಲೊಟ್ ವಾಚ್ ಪ್ರಕರಣದ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಮೂಲಕ ಅರ್ಜಿ ಸಲ್ಲಿಸಲು ದೂರುದಾರ ನಟರಾಜ್ ಶರ್ಮಾ ಅವರಿಗೆ ಹೈಕೋರ್ಟ್ ಸಲಹೆ ನೀಡಿದೆ.
ದೂರುದಾರರಾದ ತಮ್ಮ ಹೇಳಿಕೆಯನ್ನೇ ಪಡೆಯದೆ, ಹ್ಯೂಬ್ಲೊಟ್ ವಾಚ್ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ನೀಡಿದೆ. ಹೀಗಾಗಿ, ಪ್ರಕರಣದ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ತಮಗೆ ಒದಗಿಸಲು ಎಸಿಬಿಗೆ ನಿರ್ದೇಶಿಸುವಂತೆ ಕೋರಿ ವಕೀಲ ನಟರಾಜ್ ಶರ್ಮಾ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆಯಲ್ಲ ಎಂದು ಅರ್ಜಿದಾರರನ್ನು ಪ್ರಶ್ನಿಸಿತು.
ಇದಕ್ಕುತ್ತರಿಸಿದ ವಕೀಲ ನಟರಾಜ್ ಶರ್ಮಾ, ದೂರುದಾರನಾದ ತಮಗೆ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನುಕೇಳುವ ಸಂಪೂರ್ಣ ಹಕ್ಕಿದೆ. ಈಗಾಗಲೇ ದಾಖಲೆಗಳನ್ನು ಒದಗಿಸುವಂತೆ ಕೋರಿ 3 ಬಾರಿ ಮನವಿ ಮಾಡಿದ್ದರೂ ಅದನ್ನು ಪರಿಗಣಿಸಿಲ್ಲ. ಹೀಗಾಗಿ ಈ ಕುರಿತು ಎಸಿಬಿಗೆ ನಿರ್ದೇಶಿಸುವಂತೆ ಕೋರಿದರು.
ಸರಕಾರಿ ವಕೀಲ ವಿ.ಶ್ರೀನಿಧಿ ವಾದಿಸಿ, ಅರ್ಜಿದಾರರು ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದರೆ ಅದನ್ನು ಪರಿಶೀಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದರಿಂದ ನ್ಯಾಯಪೀಠ, ಪ್ರಕರಣದ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಕೋರಿ ಅರ್ಜಿದಾರರು ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದರೆ, ಅದನ್ನು ಎಸಿಬಿ ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ಸೂಚಿಸಿ, ತಕರಾರು ಅರ್ಜಿ ಇತ್ಯರ್ಥಪಡಿಸಿತು.







