ಮೂಡುಬಿದಿರೆ, ಜು. 2: ಅಲ್-ಪುಖಾ೯ನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನ ಮಹೋತ್ಸವ

ಮೂಡುಬಿದಿರೆ, ಜು. 2: ಅಲ್-ಪುಖಾ೯ನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನದ ಅಂಗವಾಗಿ ವಿದ್ಯಾರ್ಥಿಗಳ ವಿವಿಧ ತಂಡಗಳು ವಿವಿಧ ರೀತಿಯ ಚಟುವಟಿಕೆಗಳಲ್ಲಿ ತೊಡಗುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಹೈಸ್ಕೂಲ್ ವಿದ್ಯಾರ್ಥಿಗಳ ವಿಭಾಗದಲ್ಲಿ ಮುಖ್ಯ ಅತಿಥಿಯಾಗಿ ಸಮಾಜ ಸೇವಕ ನಾಗರಾಜ್ ಮಾತನಾಡಿ "ಡಾಕ್ಟರ್ ಇಂಜಿನಿಯರ್ ಕನಸು ಕಾಣುವಂತಹ ಇಂದಿನ ಜನಾಂಗದಲ್ಲಿ ಒಬ್ಬ ಕೃಷಿಕನಾಗಬೇಕೆಂದು ಬಯಸುವ ವಿದ್ಯಾರ್ಥಿಗಳು ಪೋಷಕರು ಇಲ್ಲವಾಗಿದ್ದಾರೆ. ಭವಿಷ್ಯದಲ್ಲಿ ಕೃಷಿಕನಾಗಬೇಕು ಎನ್ನುವ ಬಯಕೆ ಇಲ್ಲದಿದ್ದರೂ ಕನಿಷ್ಠ ಪಕ್ಷ ಮನೆಯಲ್ಲಿ ಚಿಕ್ಕಪುಟ್ಟ ತರಕಾರಿ ಬೆಳೆಸುವುದು ಅಥವಾ ಗಿಡಗಳಿಗೆ ನೀರು ಹಾಕುವಂತಹ ಮಟ್ಟಕ್ಕಾದರೂ ವಿದ್ಯಾರ್ಥಿಗಳು ಬೆಳೆಯಬೇಕು ಎಂದರು.ಸಂಸ್ಥೆಯ ಆಡಳಿತಾಧಿಕಾರಿ ಮುಹಮ್ಮದ್ ಶಹಾಂ ಸಸಿಯನ್ನು ಶಾಲಾ ದೈಹಿಕ ಶಿಕ್ಷಕ ಉಬೇದುಲ್ಲಾರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟನೆಗೈದರು.
ಹೈಸ್ಕೂಲ್ ವಿದ್ಯಾರ್ಥಿನಿಯರ ತಂಡವು ಸಮೀಪದ ಕೆಸರುಗದ್ದೆ ಪ್ರದೇಶಕ್ಕೆ ಭೇಟಿ ನೀಡಿ ಸಸಿಗಳನ್ನು ನೆಟ್ಟರು. ವಿಜ್ಞಾನ ವಿನಿಮಯ ಕೇಂದ್ರದ ಕಾರ್ಯದರ್ಶಿಯಾದ ಶ್ರೀಮತಿ ಸುಶೀಲ ಅವರು ಕಸಿ ಮಾಡುವ ವಿಧಾನ, ಗಿಡ ಮರಗಳ ಅವಶ್ಯಕತೆ ಮತ್ತು ಪ್ರಾಮುಖ್ಯತೆಯನ್ನು ಸ್ಪೂರ್ತಿದಾಯಕ ಪದಗಳ ಮೂಲಕ ವಿವರಿಸಿದರು. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಒಂದು ತಂಡವು ಮಿಜಾರಿನಲ್ಲಿರುವ ಶೋಭಾವನಕ್ಕೆ ಭೇಟಿ ನೀಡಿ ಅಲ್ಲಿರುವ ಔಷಧಿ ಗಿಡಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.
ಒಂದರಿಂದ ಮೂರನೇ ತರಗತಿಯ ವಿದ್ಯಾರ್ಥಿಗಳು ಎಲೆಗಳ ನೇಯ್ಗೆ, ತರಕಾರಿ ನಾಟಿ, ತೆಂಗಿನ ಮರದ ಎಲೆಗಳನ್ನು ಬಳಸಿ ಮ್ಯಾಟ್ ತಯಾರಿಸುವುದು ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿ ಮಹಮ್ಮದ್ ಅಶ್ಪಾಕ್ . ತಾಂತ್ರಿಕ ಆಡಳಿತಾಧಿಕಾರಿ ನೂರ್ ಮುಹಮ್ಮದ್, ಅರೆಬಿಕ್ ವಿಭಾಗದ ಮುಖ್ಯಸ್ಥ ಅಬ್ದುಲ್ ಮುಸವ್ವಿರ್ ಉಮ್ರಿ ಮದನಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಮಹಮ್ಮದ್ ಸೈಪುಲ್ಲಾ ಕಾರ್ಯಕ್ರಮ ನಿರೂಪಿಸಿದರು.







